census ಜನಗಣತಿ ಕಿಟ್​ 
ರಾಜ್ಯ

ಜನಗಣತಿ ಸಿಬ್ಬಂದಿಗೆ ಬಿಸಿಲಿನ ಶಿಕ್ಷೆ census

ಕೋಲಾರ ಡೆಸ್ಕ್
ಮುಳಬಾಗಿಲು: ದೇಶದ ಭವಿಷ್ಯವನ್ನು ನಿರ್ಧರಿಸುವ census ಮಹತ್ವದ ಮನೆ ಗಣತಿ ಹಾಗೂ ಜನಗಣತಿ ಪ್ರಕ್ರಿಯೆ ಏ.15ರಿಂದಲೇ ಆರಂಭಗೊಂಡಿದ್ದರೂ, ಸಿಬ್ಬಂದಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಬಿಸಿಲಿನ ಬೇಗೆಯ ನಡುವೆಯೂ ಸಾಮಗ್ರಿಗಳಿಲ್ಲದೆ ಬರಿಗೈಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಸರ್ಕಾರದ "ಜಾಣ ಕುರುಡು' ನೀತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಣತಿ ಕಾರ್ಯಕ್ಕೆ ಬೇಕಾದ ಪರ್ಮನೆಂಟ್​ ಮಾರ್ಕರ್​, ನಕ್ಷೆ ತಯಾರಿಕಾ ಹಾಳೆ, ಬ್ಯಾಗ್​ ಹಾಗೂ ಛತ್ರಿಗಳನ್ನು ಇಲಾಖೆ ಇನ್ನೂ ಸರಬರಾಜು ಮಾಡಿಲ್ಲ. 35ಗೂ ಅಧಿಕ ತಾಪಮಾನವಿರುವ ಈ ಹೊತ್ತಿನಲ್ಲಿ ಕೇವಲ ಟೋಪಿ ನೀಡಿ ಕೈತೊಳೆದುಕೊಳ್ಳಲಾಗಿದೆ. ಹೀಗಾಗಿ, ಗಣತಿದಾರರು ತಮ್ಮ ಸ್ವಂತ ಹಣದಿಂದ ಪೆನ್ನು, ಮಾರ್ಕರ್​ ಕೊಂಡು ಮನೆಗಳಿಗೆ ನಂಬರ್​ ಹಾಕುವ ಕೆಲಸ ಮಾಡುತ್ತಿದ್ದಾರೆ.
ಅಧಿಕಾರಿಗಳ ಅಸಹಾಯಕತೆ:
ಈ ಬಗ್ಗೆ ಜಿಲ್ಲಾಮಟ್ಟದ ಸಭೆಯಲ್ಲಿ ತಹಸೀಲ್ದಾರರು ಪ್ರಶ್ನಿಸಿದಾಗ, ಜಿಲ್ಲಾಧಿಕಾರಿಗಳು ಪ್ರಶ್ನೆ ಮಾಡದೆ ಕೆಲಸ ಮಾಡಿ ಸಾಧನೆ ತೋರಿಸಿ ಎಂದು ಕಟ್ಟಾಜ್ಞೆ ನೀಡಿದ್ದಾರೆ ಎನ್ನಲಾಗಿದೆ. ಪ್ರಗತಿ ಕುಂಠಿತವಾದರೆ ಕಾರಣ ಕೇಳಿ ನೋಟಿಸ್​ ಜಾರಿ ಮಾಡುತ್ತಿರುವುದು ಅಧೀನ ಅಧಿಕಾರಿಗಳ ನೈತಿಕ ಸ್ಥೆರ್ಯ ಕುಗ್ಗಿಸಿದೆ.
ಪ್ರಮುಖ ಸಮಸ್ಯೆಗಳು:
* ಸಾಮಗ್ರಿ ಕೊರತೆ: 12 ದಿನ ಕಳೆದರೂ ಕಿಟ್​ ಸಿಕ್ಕಿಲ್ಲ. ಬಿಲ್​ ಕ್ಲೆಮ್​ ಮಾಡುವ ಬಗ್ಗೆ ಸ್ಪಷ್ಪತೆ ಇಲ್ಲದ ಕಾರಣ ಸಿಬ್ಬಂದಿ ಗೊಂದಲದಲ್ಲಿದ್ದಾರೆ.
* ಡೆಡ್​ಲೈನ್​ ಆತಂಕ: ಸಾಮಗ್ರಿ ಇಲ್ಲದಿದ್ದರೂ ಮೂರು ದಿನದಲ್ಲಿ ನಕ್ಷೆ ಸಲ್ಲಿಸುವಂತೆ ಒತ್ತಡ ಹೇರಲಾಗುತ್ತಿದೆ.
* ಸಮನ್ವಯದ ಕೊರತೆ: ರಾಜ್ಯಮಟ್ಟದಲ್ಲಿ ಟೆಂಡರ್​ ಪ್ರಕ್ರಿಯೆ ಅಥವಾ ಅನುದಾನದ ಕೊರತೆಯಿಂದಾಗಿ ಲಾಜಿಸ್ಟಿಕ್​ ವಿಳಂಬವಾಗಿರುವ ಶಂಕೆ ವ್ಯಕ್ತವಾಗಿದೆ.
ಹೋರಾಟಕ್ಕೆ ಸಜ್ಜಾದ ಸಿಬ್ಬಂದಿ:
ಒಬ್ಬೊಬ್ಬರೇ ಧನಿ ಎತ್ತಿದರೆ ಅಧಿಕಾರಿಗಳು ಗುರಿಯಾಗಿಸುವ ಭಯದಿಂದ, ಈಗ ಎಲ್ಲ ಗಣತಿದಾರರು ಒಗ್ಗೂಡಿ ತಹಸೀಲ್ದಾರರಿಗೆ ಲಿಖಿತ ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ವಾಟ್ಸಾಪ್​ ಗ್ರೂಪ್​ಗಳ ಮೂಲಕ ತಮ್ಮ ಖರ್ಚಿನ ವಿವರಗಳನ್ನು ಹಂಚಿಕೊಳ್ಳುತ್ತಿರುವ ಸಿಬ್ಬಂದಿ, ಕಿಟ್​ ಸಿಗುವವರೆಗೆ ನಕ್ಷೆ ಸಲ್ಲಿಕೆಯ ಕಾಲಾವಕಾಶ ವಿಸ್ತರಿಸುವಂತೆ ಒತ್ತಾಯಿಸಲು ನಿರ್ಧರಿಸಿದ್ದಾರೆ.
ನಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ವೇದಿಕೆ ಇಲ್ಲ. ಮೇಲಿನ ಅಧಿಕಾರಿಗಳು ಕೇವಲ ಅಂಕಿ-ಅಂಶಗಳ ಸಾಧನೆಗೆ ಒತ್ತಾಯಿಸುತ್ತಿದ್ದಾರೆಯೇ ಹೊರತು, ಕನಿಷ್ಠ ಸೌಲಭ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.
> ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ