ದೇಶದ ಅಭಿವೃದ್ಧಿಗೆ ಗಣತಿ ಅಗತ್ಯ Census
ಬಂಗಾರಪೇಟೆ: ಜನಗಣತಿ ರಾಷ್ಟ್ರದ ಪ್ರಮುಖ ಯೋಜನೆಯಾಗಿದ್ದು, ಪ್ರತಿಯೊಬ್ಬರೂ ಇದಕ್ಕೆ ಸಹಕರಿಸಬೇಕು. ದೇಶದ ಸಮಗ್ರ ಅಭಿವೃದ್ಧಿಗೆ ಜನಗಣತಿ ಮುಖ್ಯ ಆಧಾರ ಎಂದು ತಹಸೀಲ್ದಾರ್ ಸುಜಾತಾ ತಿಳಿಸಿದರು.Census
ನಗರದ ಆದರ್ಶ ಶಾಲೆ ಹಾಗೂ ಜೂನಿಯರ್ ಕಾಲೇಜಿನಲ್ಲಿ ನಗರಸಭೆ ಕಾರ್ಯಾಲಯ ಮತ್ತು ತಾಲೂಕು ಆಡಳಿತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜನಗಣತಿ 2026-&27ರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂವಿಧಾನದ 246ನೇ ವಿಧಿಯನ್ವಯ ಜನಗಣತಿ ಕಾರ್ಯ ನಡೆಯುತ್ತಿದ್ದು, ಗಣತಿದಾರರು ಸಂವಿಧಾನಿಕ ಅಧಿಕಾರ ಹೊಂದಿರುತ್ತಾರೆ ಎಂದು ತಿಳಿಸಿದರು.
ಏ.15ರಿಂದ ಮೇ 14ರವರೆಗೆ ಮೊದಲ ಹಂತದಲ್ಲಿ ಮನೆಗಳ ಗಣತಿ ಕಾರ್ಯ ನಡೆಯಲಿದೆ. ಈ ಬಾರಿಯ ಜನಗಣತಿ ಪರಿಸರ ಸ್ನೇಹಿ ಮಾದರಿಯಲ್ಲಿ ನಡೆಯುತ್ತಿದ್ದು, ಮೊಬೈಲ್ ಆ್ಯಪ್ ಮೂಲಕವೇ ಎಲ್ಲ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರಿಂದ ಕಾಗದ ಬಳಕೆ ಸಂಪೂರ್ಣವಾಗಿ ತಪ್ಪಲಿದೆ ಎಂದು ಹೇಳಿದರು.
ನಗರ ಪ್ರದೇಶಗಳ ಜತೆಗೆ ಎಲ್ಲ ಗ್ರಾಮಗಳಿಗೂ ಗಣತಿದಾರರು ಹಾಗೂ ಮೇಲ್ವಿಚಾರಕರನ್ನು ಈಗಾಗಲೇ ನೇಮಿಸಲಾಗಿದೆ. ಅವರಿಗೆ 3 ದಿನ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕರು ಮೊಬೈಲ್ ಮೂಲಕ ಸ್ವಯಂ ಗಣತಿ ಮಾಡಿಕೊಳ್ಳುವ ಅವಕಾಶವೂ ಕಲ್ಪಿಸಲಾಗಿದ್ದು, ಗಣತಿದಾರರು ಮನೆಗೆ ಭೇಟಿ ನೀಡಿದಾಗ ಮೊಬೈಲ್ ಸ್ಕ್ರೀನ್ ತೋರಿಸುವ ಮೂಲಕ ಸಹಕಾರ ನೀಡಬಹುದು ಎಂದರು.