ಬೆಂಗಳೂರು : ನಾಡಹಬ್ಬ ಎಂದೇ ಪ್ರಸಿದ್ಧವಾಗಿರುವ ದಸರಾ ಮಹೋತ್ಸವವು ಮೈಸೂರಿನಲ್ಲಿ ಜಂಬೂ ಸವಾರಿ ಮೂಲಕ ವಿಶ್ವದ ಗಮನ ಸೆಳೆದಿದೆ. ಅಂತಹ ದಸರಾ ಹಬ್ಬದ ಸಂಭ್ರಮ ನಗರದಾದ್ಯಂತ ಕೂಡ ಕಂಡು ಬಂತು. ವಿಶೇಷ ಎಂಬಂತೆ ಈ ಬಾರಿ 10 ದಿನಗಳ ಕಾಲ ನಡೆದ ನವರಾತ್ರಿ ಉತ್ಸವಕ್ಕೆ ಮಂಗಳವಾರ ತೆರೆ ಬಿದ್ದಿದ್ದು, ಬುಧವಾರ ವಿಜಯ ದಶಮಿ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದವು.
ನಗರದ ವಿವಿಧೆಡೆ ಇರುವ ಶಕ್ತಿದೇವತೆಗಳ ದೇವಾಲಯಗಳಲ್ಲಿ ದಸರಾ ಅಂಗವಾಗಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ ಹಾಗೂ ಉತ್ಸವಗಳನ್ನು ಆಯೋಜಿಸಲಾಗಿತ್ತು. ಭಕ್ತರು ಬೆಳಗ್ಗಿನಿಂದಲೇ ಆಗಮಿಸಿ ದೇವರ ದರ್ಶನ ಮಾಡಿದರು. ಸಂಜೆ ವೇಳೆಗೆ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ವಿನಿಮಯ ಮಾಡಿಕೊಂಡು ‘ಪರಸ್ಪತ ಬನ್ನಿ ಬಂಗಾರವಾಗಲಿ’ ಎಂದು ಶುಭ ಹಾರೈಸಿದರು.
ಬೆಂಗಳೂರು ದಸರಾ ಎಂದೇ ಪ್ರಸಿದ್ಧವಾಗಿರುವ ಬಹುತೇಕ ಶತಮಾನದ ಇತಿಹಾಸ ಹೊಂದಿರುವ ಜೆ.ಸಿ.ನಗರ ದಸರಾ ಮಹೋತ್ಸವವು ಈ ಬಾರಿ ‘ಹೆಬ್ಬಾಳ ದಸರಾ’ ಎಂಬ ಹೆಸರಿನಲ್ಲಿ 10 ದಿನಗಳ ಕಾಲ ಆಚರಿಸಲಾಯಿತು. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಶೇಷವಾಗಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲ ದೇವತೆಗಳ ಉತ್ಸವ ಮೂರ್ತಿಗಳಿಗೆ ಜೆ.ಸಿ.ನಗರ ದಸರಾ ಮೈದಾನದಲ್ಲಿ ಪೂಜೆ ಸಲ್ಲಿಸಲಾಯಿತು. ಸುಮಾರು ನೂರು ದೇವರ ಅಲಂಕೃತ ವಾಹನದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಜಾನಪದ ಕಲಾ ಮೇಳಗಳು ನೋಡುಗರ ಕಣ್ಮನ ಸೆಳೆದವು. ಈ ನಡುವೆ ಪ್ರತಿದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ವಿಶೇಷ ಮೆರಗು ನೀಡಿದವು.
ದೇವರ ವಿಗ್ರಹಗಳ ವಿಸರ್ಜನೆ:
ನವರಾತ್ರಿಯಲ್ಲಿ ದೇವಿ ದೇವಾಲಯಗಳಲ್ಲಿ ಮಾಡಿದ್ದ ಘಟಸ್ಥಾಪನೆಯನ್ನು ಮಂಗಳವಾರ ಸಂಜೆಯೇ ವಿಸರ್ಜಿಸಲಾಯಿತು. ಕೆಲವೆಡೆ ಸ್ಥಾಪಿಸಲಾಗಿದ್ದ ದುರ್ಗಾ ಮತ್ತು ಶಾರದಾ ದೇವಿಯ ಮೃತ್ತಿಕೆ ಮೂರ್ತಿಗಳನ್ನು ಬುಧವಾರ ವಿಸರ್ಜಿಸಲಾಯಿತು. ಉತ್ತರ ಭಾರತೀಯರು ಹಾಗೂ ಬೆಂಗಾಲಿಗರು ಹೆಚ್ಚಾಗಿರುವ ಬಡಾವಣೆಗಳಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಿದ್ದ ದುರ್ಗಾದೇವಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಹಲಸೂರು ಕೆರೆಯಲ್ಲಿ ಸಾಮೂಹಿಕವಾಗಿ ವಿಸರ್ಜಿಸಲಾಯಿತು. ಇದೇ ವೇಳೆ ಕೆಲ ದೇವಾಲಯ ಹಾಗೂ ಮನೆಗಳಲ್ಲಿ ಕೂರಿಸಲಾಗಿದ್ದ ದಸರಾ ಬೊಂಬೆಗಳಲ್ಲಿ ಪಟ್ಟದ ಬೊಂಬೆಗಳಿಗೆ ಪೂಜೆ ಸಲ್ಲಿಸಿ ವಿಸರ್ಜಿಸಲಾಯಿತು.
ಶಕ್ತಿಸ್ಥಳಗಳಲ್ಲಿ ಭಕ್ತಿ ಪರಾಕಾಷ್ಠೆ
ನವರಾತ್ರಿ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ನಗರದ ವಿವಿಧ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮಗಳಿಗೆ ಬುಧವಾರ ತೆರೆಬಿತ್ತು. ನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ದೇವತೆಗಳ ದರ್ಶನ ಮಾಡಿ, ಪೂಜೆ ಸಲ್ಲಿಸಿದರು. ನಿತ್ಯ ದೇವಾಲಯಗಳಲ್ಲಿ ದೇವಿ ಪಾರಾಯಣ, ಪ್ರವಚನ, ಭಕ್ತಿ ಗಾಯನ, ಭಜನೆ, ಉತ್ತರ ಭಾರತದ ಬಹುಪ್ರಸಿದ್ಧ ದಾಂಡಿಯಾ ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ
ನಗರದ ಪ್ರಸಿದ್ಧ ಬನಶಂಕರಿ ದೇವಾಲಯದಲ್ಲಿ ನವರಾತ್ರಿ ಮತ್ತು ವಿಜಯ ದಶಮಿ ಅಂಗವಾಗಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಾಲಯದಲ್ಲಿ ಮಂಗಳವಾರ ಆಯುಧ ಪೂಜೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಪೂಜೆ ನಡೆಯಿತು. ಬುಧವಾರದಂದು ಕೂಡ ವಾಹನಗಳ ಪೂಜೆ ಮುಂದುವರೆದಿತ್ತು. ವಿದ್ಯಾರಣ್ಯಪುರದ ದುರ್ಗಾದೇವಿ ದೇವಸ್ಥಾನ, ಮಲ್ಲೇಶ್ವರದ ಗಂಗಮ್ಮದೇವಿ ದೇವಸ್ಥಾನ, ಮತ್ತಿಕೆರೆ ಚೌಡೇಶ್ವರಿ ದೇವಾಲಯ, ಜಾಲಹಳ್ಳಿ ಮುತ್ಯಾಲಮ್ಮ ದೇವಸ್ಥಾನ, ಶಂಕರಮಠದ ಶಾರದಾ ದೇವಿ ದೇವಾಲಯ, ಮೆಜೆಸ್ಟಿಕ್ನ ಅಣ್ಣಮ್ಮದೇವಿ ದೇವಾಲಯ, ಮಲ್ಲೇಶ್ವರದ ವಾಸವಿ ಕನ್ನಿಕಾಪರಮೇಶ್ವರಿ ದೇವಾಲಯ, ಬ್ಯಾಟರಾಯನಪುರದ ಗ್ರಾಮದೇವತೆ ದೇವಾಲಯ ಹೀಗೆ ನಗರದ ಎಲ್ಲ ಭಾಗಗಳಲ್ಲಿರುವ ದೇವತೆಗಳ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಉತ್ಸವ ನೆರವೇರಿಸಲಾಯಿತು.