ಗೋಪಾಲಪು ಚರ್ಚ್‌ನಲ್ಲಿ ಮಾತೆ ಮರಿಯಮ್ಮ ಅವರಿಗೆ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು. 
ರಾಜ್ಯ

ಸಂತ ಅಂಥೋನಿ ಚರ್ಚ್‌ನಲ್ಲಿ ಮೊಂತಿ ಹಬ್ಬದ ಸಡಗರ

ಪ್ರಮುಖ ಮುಖ್ಯಾಂಶಗಳು

  • ಗೋಪಾಲಪುರ ಸಂತ ಅಂಥೋನಿ ಚರ್ಚ್‌
  • ಮಾತೆ ಮರಿಯಮ್ಮ ಅವರ ಜನ್ಮೋತ್ಸವದ ಮೊಂತಿ ಹಬ್ಬ
ಶನಿವಾರಸಂತೆ: ಸಮೀಪದ ಗೋಪಾಲಪುರ ಸಂತ ಅಂಥೋನಿ ಚರ್ಚ್‌ನಲ್ಲಿ ಮಾತೆ ಮರಿಯಮ್ಮ ಅವರ ಜನ್ಮೋತ್ಸವದ ಮೊಂತಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದ್ದ ಮಾತೆ ಮರಿಯಮ್ಮ ಭವ್ಯ ತೇರಿನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಭಕ್ತರು ಜಯಘೋಷ, ಪ್ರಾರ್ಥನೆಯೊಂದಿಗೆ ತೇರನ್ನು ಚರ್ಚ್‌ನ ಸುತ್ತಲೂ ಪ್ರದಕ್ಷಣೆ ಹಾಕಿಸಿದರು.
ಚರ್ಚ್‌ನ ಪ್ರಧಾನ ಧರ್ಮಗುರು ಫಾದರ್ ಕ್ರಿಸ್ಟೋಫರ್ ಸಾಗರ್ ರಾಜ್ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ನೆರವೇರಿಸಲಾಯಿತು. ನಂತರ ಹಬ್ಬದ ಸಂಪ್ರದಾಯದಂತೆ ಪ್ರಕೃತಿಯ ಕೊಡುಗೆಯಾದ ಹೊಸ ಭತ್ತದ ತೆನೆಗಳನ್ನು ಮಂತ್ರಿಸಿ ಆಶೀರ್ವದಿಸಿದ ಬಳಿಗೆ ಭಕ್ತರಿಗೆ ಪವಿತ್ರ ಭತ್ತದ ತೆನೆಯನ್ನು ವಿತರಿಸಲಾಯಿತು. 
ಭಕ್ತರು ಮನೆಯಿಂದ ತಂದಿದ್ದ ಬಣ್ಣ ಬಣ್ಣದ ಹೂವುಗಳನ್ನು ಹಿಡಿದು ಮಾತೆಯ ಭಕ್ತಿಗೀತೆಗಳನ್ನು ಹಾಡುತ್ತ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.  ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಶನಿವಾರಸಂತೆ, ಬೀಟೆಕಟ್ಟೆ, ಕಳಲೆ ಹೊಸೂರು, ಕೊಡ್ಲಿಪೇಟೆ ಸುತ್ತಮುತ್ತಲಿನ ಕ್ರೈಸ್ತರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.