Celebration of the worship of Lord Sripadaraja at Narasimha Theertha
ಮುಳಬಾಗಿಲು: ಶ್ರೀ ಕ್ಷೇತ್ರ ನರಸಿಂಹ ತೀರ್ಥದಲ್ಲಿ ಶ್ರೀಪಾದರಾಜರ ವಾರ್ಷಿಕ ಆರಾಧನೆ ಕಾರ್ಯಕ್ರಮ ಮಧ್ಯಾರಾಧನೆ ಅಂಗವಾಗಿ ಶ್ರೀ ಯೋಗನರಸಿಂಹ ದೇವರಿಗೆ ಮತ್ತು ಶ್ರೀಪಾದರಾಜರ ಮೂಲ ಬೃಂದಾವನಕ್ಕೆ ಭಾನುವಾರ ಸರ್ವಮೂಲ ಮತ್ತು ವೇದ ಪಾರಾಯಣ, ಸಂಸ್ಥಾನ ಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ ನೆರವೇರಿಸಲಾಯಿತು.
ನಂತರ ಶ್ರೀಯೋಗಾನರಸಿಂಹ ದೇವರ ರಥೋತ್ಸವಕ್ಕೆ ಮಠದ ಪರಂಪರೆಗಳಂತೆ ಶ್ರೀಪಾದರಾಜರ ಮಠಾಧೀಶ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ಸಲ್ಲಿಸಿದರು.
ಭಕ್ತರು ಹರಿನಾಮಸ್ಮರಣೆ, ಭಜನೆ, ಕೀರ್ತನೆ, ಕೋಲಾಟ ಮುಂತಾದ ಸಂಸತಿಕ ಕಾರ್ಯಕ್ರಮಗಳ ಮೂಲಕ ರಥೋತ್ಸವಕ್ಕೆ ಮೆರುಗು ತಂದರು. ಸೇವಾ ಕರ್ತರು ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ, ಪ್ರಸಾದ ವಿತರಿಸಿದರು.
ಶ್ರೀಪಾದರಾಜರ ಮಠಾಧೀಶ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳವರು ಮಾತನಾಡಿ, ಧೈವಾಂಶ ಸಂಭೂತರೂ, ಕನ್ನಡ ಹರಿದಾಸ ಸಾಹಿತ್ಯ ಆದ್ಯ ಪ್ರವರ್ತಕರೂ, ಶ್ರೀ ಪದ್ಮನಾಭತೀರ್ಥ ಸತ್ಪರಂಪರೆಯ ನೇತಾರರೂ, ಅಪರೋಕ್ಷಜ್ಞಾನಿವರೇಣ್ಯರಾದ ಶ್ರೀ ಪಾದರಾಜರ ಹಾಗೂ ಶ್ರೀ ಅಕ್ಷೇಭ್ಯತಿರ್ಥರು ಅಂಗಾರದಲ್ಲಿ ಚಿತ್ರಿಸಿ ಸ್ವಯಂ ವ್ಯಕ್ತವಾದ ಶ್ರೀ ಯೋಗಾನರಸಿಂಹದೇವರ ಪುಣ್ಯ ಕ್ಷೇತ್ರವೇ ನರಸಿಂಹತೀರ್ಥ ಕ್ಷೇತ್ರ. ಶ್ರೀ ಶ್ರೀಪಾದರಾಜರ ವಿದ್ಯಾ ಶಿಷ್ಯರು ಕರ್ನಾಟಕ ಸಿಂಹಾಸನಾಧೀಶ್ವರರಾದ ಶ್ರೀವ್ಯಾಸರಾಜರ ತಪೋಭೂಮಿ ಶ್ರೀ ಕ್ಷೇತ್ರ ನರಸಿಂಹ ತೀರ್ಥವಾಗಿದೆ ಎಂದರು.
ಶ್ರೀಪಾದರಾಜರು ಕನ್ನಡಲ್ಲಿ ಹರಿಭಕ್ತಿಯ ಹಿರಿಮೆ ಹಾಗೂ ಉತ್ತಮ ಜೀವನ ಮೌಲ್ಯ ಬಿತ್ತರಿಸುವ ನೂರಾರು ಕೀರ್ತನೆ, ದೇವರ ನಾಮ ರಚಿಸಿದ್ದಾರೆ. ಅವರ ತತ್ವಾದರ್ಶ, ವಿಚಾರಧಾರೆ ಉತ್ತಮ ಸಮಾಜಕ್ಕೆ ಅವಶ್ಯ. ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಮಲ ತಿರುಪತಿ ದೇವಸ್ಥಾನ ಹಾಗೂ ವೇದ ವಿಜ್ಞಾನ ಸಂಸ್ಥ ಟ್ರಸ್ಟ್ ಸಹಯೋಗದಲ್ಲಿ ವಿಶೇಷ ಸಾಂಸತಿಕ ಕಾರ್ಯಕ್ರಮಗಳು ನಡೆದವು.
ಸೋಮವಾರ ಪೌರ್ಣಮಿ ಉತ್ತರಾರಾಧನೆ- ಅಂಗವಾಗಿ ಬೆಳಗ್ಗೆ ಸರ್ವಮೂಲ ಮತ್ತು ವೇದಪಾರಾಯಣ, ಸಂಸ್ಥಾನ ಪೂಜೆ, ಪಂಚಾಮೃತ ಅಭಿಷೇಕ, ಶ್ರೀಸತ್ಯನಾರಾಯಣ ಪೂಜೆ, ಶ್ರೀ ಸ್ವರ್ಣವರ್ಣತೀರ್ಥ ವಿದ್ವತ್ ಸಭಾ ಉದ್ಘಾಟನೆ, ಸಂಜೆ ಸಂಸತಿ ಕಾರ್ಯಕ್ರಮ, ನಂತರ ಪ್ರಾಕಾರೋತ್ಸವ, ಮಹಾಮಂಗಳಾರುತಿಯೊಂದಿಗೆ ಸಂಪನ್ನಗೊಳ್ಳಲಿದೆ.