ವಿಜಯಪುರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ಸಾರ್ವಭೌಮರ ಆರಾಧನಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಗೋಪಾಲ ನಾಯಕ, ವಾಮನರಾವ ದೇಶಪಾಂಡೆ, ವಿಜಯೀಂದ್ರ ಜೋಶಿ, ರವಿ ಆಚಾರ್ಯ, ಶ್ರೀಧರಾಚಾರ್ಯ ಮತ್ತಿತರರಿದ್ದಾರೆ.
ವಿಜಯಪುರ : ಬಾಗಲಕೋಟೆ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ಶ್ರೀ ಜಯತೀರ್ಥರ ಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಬೆಳಗ್ಗೆ ಗುರುಸಾರ್ವಭೌಮರ ಅಷ್ಟೋತ್ತರ, ಸುಧಾ ಪಾರಾಯಣ, ವೃಂದಾವನಕ್ಕೆ ಫಲ ಪಂಚಾಮೃತ, ಅಲಂಕಾರ ಮತ್ತು ಮಹಾಪೂಜೆ ಜರುಗಿದವು. ಅಲ್ಲದೆ, ಜಯತೀರ್ಥರ ಭಾವಚಿತ್ರಕ್ಕೆ ಹೂಮಾಲೆಗಳಿಂದ ಅಲಂಕರಿಸಿ ಭಕ್ತಿಭಾವದಿಂದ ನಮಿಸಲಾಯಿತು. ನಂತರ ಮಠದ ಒಳಾವರಣದಲ್ಲಿ ಟೀಕಾರಾಯರ ರಚಿಸಿದ ಗ್ರಂಥಗಳನ್ನು ಹಾಗೂ ಭಾವಚಿತ್ರಗಳಿಗೆ ಪುಷ್ಪಗಳನ್ನಿಟ್ಟ ಅಲಂಕೃತ ರಥೋತ್ಸವ ಜರುಗಿತು.
ರಥೋತ್ಸವ ವೇಳೆ ದೇವರ ನಾಮಗಳ ಸುಮಧುರ ಕಂಠದ ಹಾಡುಗಳು ಭಕ್ತರು ಹಾಡಿ ಸಂಭ್ರಮಿಸಿದರು.
ಬಳಿಕ ಮಂತ್ರಾಲಯ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪಂ. ಮಾಧ್ವ ಮಾಧವ ಪ್ರಶಸ್ತಿ ಪುರಸ್ಕೃತ ಕರಣಂ ವೆಂಕಟೇಶಾಚಾರ್ಯ ಪ್ರವಚನ ನೀಡಿ, ಟೀಕಾರಾಯರನ್ನು ಸ್ಮರಣೆ ಮಾಡಿದರೆ ಕಾಮಧೇನುವಿನಂತೆ ಅಪೇಕ್ಷೆ ಪಟ್ಟದೆಲ್ಲ ಲಭಿಸುತ್ತದೆ. ಹಣದ ವ್ಯಾಮೋಹ ನಾಶ ಮಾಡುವ ಶಕ್ತಿ ಜಯತೀರ್ಥರ ಸ್ಮರಣೆಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರಾವಣ ಮಾಸದಲ್ಲಿ ನಡೆಯಲಿರುವ ರಾಘವೇಂದ್ರ ಗುರು ಸಾರ್ವಭೌಮರ ಆರಾಧನೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಮಠದ ಅರ್ಚಕ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯರು ವೃಂದಾವನಕ್ಕೆ ವಿವಿಧ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಿದ್ದರು. ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ, ವಾಮನರಾವ ದೇಶಪಾಂಡೆ, ವಿಜಯೀಂದ್ರ ಜೋಶಿ, ಕೃಷ್ಣ ಪಡಗಾನೂರ, ಅಶೋಕ ತಾವರಗೇರಿ, ಶ್ರೀಧರ ಹರಿದಾಸ, ಭೀಮಣ್ಣ ಹೆಗಡ್ಯಾಳ, ದಾಮೋದರಾಚಾರ್ಯ, ಪ್ರಕಾಶ ಬಿಜಾಪುರ, ಡಿ.ಆರ್. ನಾಡಿಗ, ಪ್ರದೀಪ ಪಾಟೀಲ ಮತ್ತಿತರರಿದ್ದರು.