Celebration of BJP workers 
ರಾಜ್ಯ

ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ತುಮಕೂರು ಡೆಸ್ಕ್
ಕೊರಟಗೆರೆ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತ ಸಾಧಿಸಿರುವ ಹಿನ್ನೆಲೆ ಕೊರಟಗೆರೆ ಪಟ್ಟಣದ ಎಸ್​ಎಸ್​ಆರ್​ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಸಿಹಿ ಹಂಚಿ, ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು.
ಬಿಜೆಪಿ ಮುಖಂಡ ಹಾಗೂ ನಿವೃತ್ತ ಐಎಎಸ್​ ಅಧಿಕಾರಿ ಅನಿಲ್​ ಕುಮಾರ್​ ಮಾತನಾಡಿ, ಕೆಲವೇ ಪ್ರಾಂತಗಳಿಗೆ ಸೀಮಿತವಾಗಿದ್ದ ಬಿಜೆಪಿ ಇಂದು ದೇಶಾದ್ಯಂತ ತನ್ನ ಸಂಘಟನೆ ಬಲಪಡಿಸಿಕೊಂಡಿದೆ. ಪ್ರತಿ ರಾಜ್ಯದಲ್ಲೂ ಪಕ್ಷದ ಪ್ರಭಾವ ಹೆಚ್ಚುತ್ತಿರುವುದು ಜನರ ವಿಶ್ವಾಸವನ್ನು ತೋರಿಸುತ್ತದೆ ಎಂದರು.
ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಗಟ್ಟಿಯಾದ ನೆಲೆ ಹೊಂದಿದೆ ಎಂಬ ಅಭಿಪ್ರಾಯವಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪಕ್ಷ ತನ್ನ ಮತ ಪ್ರಮಾಣ ಹೆಚ್ಚಿಸಿಕೊಂಡು ಪ್ರಾಬಲ್ಯ ವಿಸ್ತರಿಸಿಕೊಂಡಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ರುದ್ರೇಶ್​ ಮಾತನಾಡಿ, ಪ್ರಸ್ತುತ ದೇಶದ 19ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳು ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸಿರುವುದು ಈ ಯಶಸ್ಸಿಗೆ ಪ್ರಮುಖ ಕಾರಣ ಎಂದರು.
ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ದರ್ಶನ್​ ಮಾತನಾಡಿ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಸಾಧನೆ ಮಾಡಿರುವುದು ಜನರಲ್ಲಿ ಬದಲಾವಣೆಯ ಆಸೆ ತೋರಿಸುತ್ತದೆ. ಇದು ಅಭಿವೃದ್ಧಿ ಹಾಗೂ ಸುಶಾಸನದ ಮೇಲೆ ಜನರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ಕಸಬಾ ಘಟಕದ ದಯಾನಂದ, ಹೊಳವನಹಳ್ಳಿ ಘಟಕ ಚೇತನ್​ ಆರಾಧ್ಯ, ಮಹಿಳಾ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾಮಣಿ, ಮುಖಂಡರಾದ ರೂಪಾ, ಮಮತಾ ದಿವಾಕರ್​, ಅರುಣ್​ ಕುಮಾರ್​ ಇದ್ದರು.