ಸುರಪುರ ನಗರದ ಝಂಡದಕೇರಾ ಈದ್ಗಾ ಮೈದಾನದಲ್ಲಿ ಗುರುವಾರ ಮುಸ್ಲಿಂ ಸಮುದಾಯದವರು ಬಕ್ರೀದ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
- ಜಿಲ್ಲೆಯಾದ್ಯಂತ ಸಂಭ್ರದಿಂದ ಹಬ್ಬ
- ಮುಸ್ಲಿಂ ಸಮುದಾಯದಿಂದ ವಿಶೇಷ ಪ್ರಾರ್ಥನೆ
ಸುರಪುರ: ನಗರದ ಈದ್ಗಾ ಸೇರಿ ಸಮೀಪದ ಹಸನಾಪುರದ ಈದ್ಗಾ ಮೈದಾನದಲ್ಲಿ ತ್ಯಾಗ, ಬಲಿದಾನದ ಪ್ರತಿಕವಾದ ಈದ್ ಮಿಲಾದ್ ಬಕ್ರೀದ್ ಹಬ್ಬವನ್ನು ಗುರುವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಈದ್ಗಾ ಮೈದಾನಗಳಿಗೆ ನಗರದ ವಿವಿಧ ಮಸೀದಿಗಳಿಂದ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಗರದ ಝಂಡದಕೇರಾ ಈದ್ಗಾ ಮೈದಾನದಲ್ಲಿ ಗುರುವಾರ ಧರ್ಮ ಗುರುಗಳಾದ ಹಾಫೀಸ್ ಅಕ್ಬರ್ ಅಲಿ ಗೋಗಿ ಅವರು ವಿಶೇಷ ಪ್ರಾರ್ಥನೆ ನೆರವೇರಿಸಿ ಬೋಧನೆ ನೀಡಿದರು. ಬಕ್ರೀದ್ ಹಬ್ಬವು ಕೇವಲ ಆಚರಣೆಯಲ್ಲ. ಅದು ತ್ಯಾಗ ಮತ್ತು ಬಲಿದಾನಗಳ ಮಹೋನ್ನತ ಪ್ರತಿಕವಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಬೇಕಿದೆ. ವಿಶ್ವದಾದ್ಯಂತ ತಲೆದೋರಿರುವ ಬಿಕ್ಕಟ್ಟುಗಳು, ಯುದ್ಧ ಮತ್ತು ಅಶಾಂತಿಗಳು ಕೂಡಲೇ ಶಮನವಾಗಲಿ. ಮನುಕುಲದ ಒಳಿತಿಗಾಗಿ ನಾವೆಲ್ಲರೂ ಪರಸ್ಪರ ಸೌಹಾರ್ದತೆ, ಸಹೋದರತ್ವ ಹಾಗೂ ಪ್ರೀತಿಯ ಭಾವನೆ ಬೆಳೆಸಿಕೊಳ್ಳಬೇಕು ಎಂದು ಅವರು ಪ್ರಾರ್ಥಿಸಿದರು.
ಸಾಮೂಹಿಕ ಪ್ರಾರ್ಥನೆ ಮುಗಿಯುತ್ತಿದ್ದಂತೆ ಮುಸ್ಲಿಂ ಸಮುದಾಯದವರು ಪರಸ್ಪರ ಅಲಂಗಿಸಿಕೊಂಡು ಈದ್ ಮುಬಾರಕ್ ಎಂದು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆ ಮಹಾಸಭೆಯಲ್ಲಿ ಈದ್ಗಾ ಕಮಿಟಿ ಅಧ್ಯಕ್ಷ ಎ.ಆರ್.ಪಾಶಾ, ಪ್ರಮುಖರಾದ ಸೈಯದ್ ಅಹ್ಮದ್ ಪಾಶಾ ಖಾದ್ರಿ, ಅಹ್ಮದ್ ಪಠಾಣ, ಖಾಜಾ ಖಲೀಲ್ ಅಹ್ಮದ್ ಅರಕೇರಿ, ಉಸ್ತಾದ್ ವಜಾಹತ್ ಹುಸೇನ್, ಲಿಯಾಕತ್ ಹುಸೇನ್, ಅಬ್ದುಲ್ ಮುಲ್ಲಾ, ತೌಫಿಕ್ ಅಹ್ಮದ್ ಅರಕೇರಿ, ಮಹಿಬೂಬ್ ಸಾಬ್ ಜಮಾದಾರ್, ಅನ್ವರ್ ಜಮಾದಾರ್, ಆರ್.ಕೆ.ಕೋಡಿಹಾಳ, ಖಾದರ್ ಪಟೇಲ್, ಲಾಲಸಾಬ್, ಇಮ್ತಿಯಾಜ್ ಹುಸೇನ್, ಅಬೂಬಕರ್ ಬೇಗ, ಖಾಜಾ ನಿಜಾಮುದ್ದೀನ್, ಮೊಹ್ಮದ್ ಆರೀಫ್, ಅರ್ಷದ್, ಎಂಡಿ ಗೌಸ್, ಇರ್ಫಾನ್, ಮೌಲಾಲಿ ಸೌದಾಗರ್, ಖಾಜಾ ಹುಸೇನ್ ಗುಡುಗುಂಟಿ, ಗೌಸ್ಮಿಯ ಜಮಾದಾರ್ ಇತರರಿದ್ದರು.
ಹಬ್ಬದ ನಿಮಿತ್ತ ತಮ್ಮ ಯೋಗ್ಯಾನುಸಾರ ಬಡವರಿಗೆ ಹಾಗೂ ನಿರ್ಗತಿಕರಿಗೆ ಮುಕ್ತ ಹಸ್ತದಿಂದ ದಾನ&ಧರ್ಮ ಮಾಡುವ ಮೂಲಕ ಮಾನವೀಯತೆ ಮೆರೆದರು. ತಮ್ಮ ಬಂಧುಗಳಿಗೆ ಹಾಗೂ ಆಪ್ತರಿಗೆ ವಿಶೇಷ ಔತಣ ನೀಡಿ ಸಂಭ್ರಮಿಸಿರುವುದು ಕಂಡು ಬಂತು.