ಹೊಳೆನರಸೀಪುರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದರು.
- ಶಾಸಕ ಎಚ್.ಡಿ.ರೇವಣ್ಣ
- ತಾಲೂಕು ಕಚೇರಿ
ಆಗಸ್ಟ್ 15ರಂದು ನಡೆಯಲಿರುವ 80ನೇ ಸ್ವಾತಂತ್ರೃ ದಿನವನ್ನು ಅರ್ಥಪೂರ್ಣ, ಶಿಸ್ತುಬದ್ಧ ಹಾಗೂ ಜನಸ್ಪಂದನೆಯೊಂದಿಗೆ ಆಚರಿಸಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದಿಂದ ದುಡಿದ ಸಾಧಕರನ್ನು ಗುರುತಿಸಿ ಗೌರವಿಸಬೇಕು. ಅರ್ಹರನ್ನು ಆಯ್ಕೆ ಮಾಡಿ ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಆರರಿಂದ ಏಳು ಸಾಧಕರಿಗೆ ಸನ್ಮಾನ ಹಾಗೂ ರಾಷ್ಟ್ರಭಕ್ತಿ, ಸಾಮಾಜಿಕ ಜಾಗೃತಿ ಮತ್ತು ಅಭಿವೃದ್ಧಿಯ ಸಂದೇಶ ಸಾರುವ ಮೂರರಿಂದ ನಾಲ್ಕು ಆಕರ್ಷಕ ಸ್ತಬ್ಧಚಿತ್ರಗಳ (ಟ್ಯಾಬ್ಲೊ) ಪ್ರದರ್ಶನ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ವೈ.ಎಂ.ರೇಣುಕುಮಾರ್ ಮಾತನಾಡಿ, ಅಂದು ಬೆಳಗ್ಗೆ ಎಂಟು ಗಂಟೆಗೆ ಚೆನ್ನಾಂಬಿಕಾ ವೃತ್ತದಿಂದ ಮೆರವಣಿಗೆ ಆರಂಭವಾಗಲಿದೆ. ಪೇಟೆ ಬೀದಿ, ಅಂಬೇಡ್ಕರ್ ವೃತ್ತ ಹಾಗೂ ಅರಕಲಗೂಡು ರಸ್ತೆ ಮೂಲಕ ಬಯಲು ರಂಗಮಂದಿರ ತಲುಪಲಿದೆ ಎಂದು ಮಾಹಿತಿ ನೀಡಿದರು.
ಎಲ್ಲ ಸರ್ಕಾರಿ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಕಡ್ಡಾಯವಾಗಿ ಮೆರವಣಿಗೆಯಲ್ಲಿ ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹಾಗೂ ಅತಿಥಿಗಳಿಗಾಗಿ ಸೋಶಿಯಲ್ ಕ್ಲಬ್ ವತಿಯಿಂದ ಉಪಾಹಾರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ನಡೆಯುವ ಬಯಲು ರಂಗಮಂದಿರದಲ್ಲಿ ಪುರಸಭೆ ವತಿಯಿಂದ ಕಸದ ಬುಟ್ಟಿಗಳನ್ನು ಅಳವಡಿಸಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುವುದು. ಪ್ಲಾಸ್ಟಿಕ್ ಸೇರಿದಂತೆ ಹಾನಿಕಾರಕ ವಸ್ತುಗಳನ್ನು ತರದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಅಧಿಕಾರಿಗಳು ತ್ಯಾಜ್ಯವನ್ನು ನಿಗದಿತ ಕಸದ ಬುಟ್ಟಿಗಳಲ್ಲೇ ಹಾಕುವ ಮೂಲಕ ಸ್ವಚ್ಛತೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ಜಿ.ಮುನಿರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಸೋಮಲಿಂಗೇಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್, ತಾಂತ್ರಿಕ ಅಧಿಕಾರಿ ಗೋಪಾಲ್, ಕಾರ್ಮಿಕ ನಿರೀಕ್ಷಣಾಧಿಕಾರಿ ಯಮುನಾ, ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಮಾಜಿ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ಕನ್ನಡ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಓಹಿಲೇಶ್, ನಿವೃತ್ತ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಈಶ್ವರ್‌ಗೌಡ, ಚುಟುಕು ಸಾಹಿತ್ಯ ಪರಿಷತ್‌ನ ಪ್ರೇಮಾ ಮಂಜುನಾಥ್, ಸಮಾಜಸೇವಕ ಶಂಕರ ನಾರಾಯಣ ಐತಾಳ್ ಇತರರಿದ್ದರು.