ಕಲಬುರಗಿಯಲ್ಲಿ ಸ್ವಾತಂತ್ರೋತ್ಸವ ನಿಮಿತ್ತ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಸಿಇಒ ರಾಹುಲ್ ಸಂಕನೂರ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಎಸಿ ಸಾಹಿತ್ಯ ಆಲದಕಟ್ಟಿ ಇತರರಿದ್ದರು.
- ಡಿಸಿ ಇಕ್ರಮ್ ಶರೀಫ್ ಸೂಚನೆ
- ಕಲಬುರಗಿಯಲ್ಲಿ ಪೂರ್ವಸಿದ್ಧತಾ ಸಭೆ
ಕಲಬುರಗಿ: ಸ್ವಾತಂತ್ರ್ಯ ದಿನವನ್ನು ಆ.15ರಂದು ಜಿಲ್ಲಾದ್ಯಂತ ವಿಜೃಂಭಣೆ, ಅರ್ಥಪೂರ್ಣ ರೀತಿಯಲ್ಲಿ ಆಚರಿಸಲು ಅಗತ್ಯ ತಯಾರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ 80ನೇ ಸ್ವಾತಂತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ವಿವಿಧ ಸಾಂಸತಿಕ ಕಾರ್ಯಕ್ರಮ ಆಯೋಜಿಸಬೇಕು. ಡಿಎಆರ್ ಮೈದಾನದಲ್ಲಿ ಪ್ರಮುಖ ಕಾರ್ಯಕ್ರಮ ಮತ್ತು ಧ್ವಜಾರೋಹಣ ನಡೆಯಲಿದೆ. ಮಳೆ ಬಂದರೂ ತೊಂದರೆ ಆಗದಂತೆ ಜರ್ಮನ್ ಟೆಂಟ್ ಮತ್ತು ಶಾಮಿಯಾನ ವ್ಯವಸ್ಥೆ ಮಾಡಬೇಕು ಎಂದರು.
ಮೈದಾನ ಸಮತಟ್ಟು ಮತ್ತು ವೇದಿಕೆ ನಿರ್ಮಾಣದ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ವಹಿಸಿದ ಅವರು, ಸುರಕ್ಷತೆ ದೃಷ್ಟಿಯಿಂದ ಅಗ್ನಿಶಾಮಕ ವಾಹನ, ಆಂಬುಲೆನ್ಸ್ ಮತ್ತು ವೈದ್ಯಕಿಯ ತಂಡಗಳು ಸಜ್ಜಾಗಿರಬೇಕು ಎಂದು ಸೂಚನೆ ನೀಡಿದರು.
ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳಿಯ ಕಲಾವಿದರಿಗಾಗಿ ಮುಕ್ತ ಆಡಿಷನ್ ಆಯೋಜಿಸಿ. ಆಸಕ್ತರು ಮೂರ್ನಾಲ್ಕು ದಿನದೊಳಗೆ ಕನ್ನಡ ಮತ್ತು ಸಂಸತಿ ಇಲಾಖೆ, ಡಿಡಿಪಿಐ ಅಥವಾ ಡಿಡಿಪಿಯು ಕಚೇರಿಗಳಲ್ಲಿ ಹೆಸರು ನೋಂದಾಯಿಸಬೇಕು. ಬುಧವಾರ ಅಥವಾ ಗುರುವಾರ ನಡೆಯುವ ಆಡಿಷನ್ನಲ್ಲಿ ಆಯ್ಕೆಯಾದ ತಂಡಗಳಿಗೆ ಪ್ರಮುಖ ವೇದಿಕೆಯಲ್ಲಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪೊಲೀಸ್, ಅರಣ್ಯ, ಗೃಹರಕ್ಷಕ ದಳ, ಎನ್ಸಿಸಿ ತಂಡಗಳಿಂದ ಪಥಸಂಚಲನ, ನಗರದ ಪ್ರಮುಖ ವೃತ್ತಗಳಲ್ಲಿನ ಪ್ರತಿಮೆಗಳು, ಸರ್ಕಾರಿ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಆಕರ್ಷಕ ದೀಪಾಲಂಕಾರ ಮಾಡಬೇಕು. 15ರ ಸಂಜೆ 5ಕ್ಕೆ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸಾಂಸತಿಕ ಕಾರ್ಯಕ್ರಮ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಂಕನೂರ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಸಿಂಧೆ, ಎಸಿಪಿ ಪ್ರವಿಣ್ ನಾಯಕ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಎಸಿ ಸಾಹಿತ್ಯ ಆಲದಕಟ್ಟಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಶಿಕರ್ ಮೋ ಇತರರಿದ್ದರು.
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ನೆರವೇರಿಸಬೇಕು. ಇಲಾಖೆ ಸಿಬ್ಬಂದಿ ಅಂದು ಬೆಳಗ್ಗೆ 8.15ರೊಳಗೆ ಡಿಎಆರ್ ಪರೇಡ್ ಮೈದಾನಕ್ಕೆ ತಲುಪಬೇಕು. ಕರ್ತವ್ಯಲೋಪ ಎಸಗುವ ಅಥವಾ ಗೈರುಹಾಜರಾಗುವ ಅಧಿಕಾರಿ-ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
— > ಇಕ್ರಮ್ ಶರೀಫ್ ಜಿಲ್ಲಾಧಿಕಾರಿ