ಶಿಡ್ಲಟ್ಟ ತಾಲೂಕು ಕಚೇರಿಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಆಯೋಜಿಸಿದ್ದ ಅಧಿಕಾರಿಗಳ, ಗಣೇಶ ಪ್ರತಿಷ್ಠಪನಾ ಮಂಡಳಿ ಸದಸ್ಯರ ಸಭೆಯಲ್ಲಿ ತಹಸೀಲ್ದಾರ್ ಎನ್.ಗಗನಸಿಂಧು ಮಾತನಾಡಿದರು. ಆರಕ್ಷಕ ವೃತ್ತ ನಿರೀಕ್ಷಕ ಜೆ.ಎನ್.ಆನಂದಕುಮಾರ್, ತಾ.ಪಂ ಇಒ ಆರ್.ಹೇಮಾವತಿ ಮತ್ತಿತರರು ಇದ್ದರು.
ಶಿಡ್ಲಟ್ಟ :ತಾಲೂಕಿನಲ್ಲಿ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಈ ಭಾರಿಯ ಗಣೇಶೋತ್ಸವವನ್ನು ಸರಳ ಹಾಗೂ ಶಿಸ್ತುಬದ್ಧವಾಗಿ ಆಚರಿಸಲು ನಾಗರಿಕರು ಸಹಕರಿಸಬೇಕು ಎಂದು ತಹಸೀಲ್ದಾರ್ ಎನ್.ಗಗನಸಿಂಧು ಮನವಿ ಮಾಡಿದರು.
ತಾಲೂಕು ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಗಣೇಶ ಚತುರ್ಥಿಯ ಅಂಗವಾಗಿ ಆಯೋಜಿಸಿದ್ದ ಅಧಿಕಾರಿಗಳ ಹಾಗು ಗಣೇಶ ಪ್ರತಿಷ್ಠಪನಾ ಮಂಡಳಿ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಾದ್ಯಂತ ನೀರಿಗೆ ಅಭಾವವಿರುವುದರಿಂದ ಮೂರ್ತಿಗಳ ವಿಸರ್ಜನೆಗೆ ನೀರಿಲ್ಲದೆ ಕಷ್ಟಕರವಾದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿಸರ್ಜನೆಗೆ ಅಗತ್ಯವಿರುವ ನೀರಿನ ಮೂಲಗಳ ಆಧಾರದಲ್ಲಿ ನಗರ ಪ್ರದೇಶದಲ್ಲಿ ವಾರ್ಡ್ಗೊಂದರಂತೆ, ಹಳ್ಳಿಗೊಂದರಂತೆ ಗಣೇಶ ಪ್ರತಿಷ್ಠಾಪನೆಗೆ ಆದ್ಯತೆ ನೀಡಬೇಕು. ಅದರಲ್ಲಿಯೂ ಮಣ್ಣಿನ ಮೂರ್ತಿಗಳನ್ನಷ್ಟೇ ಇಡಬೇಕು. ಪಿಓಪಿ ಮೂರ್ತಿಗಳನ್ನಿಟ್ಟರೆ ಕ್ರಮ ಜರುಗಿಸಲಾಗುವುದು ಎಂದರು.
ಆರಕ್ಷಕ ವೃತ್ತ ನಿರೀಕ್ಷಕ ಜೆ.ಎನ್.ಆನಂದಕುಮಾರ್ ಮಾತನಾಡಿ, ಗಣೇಶ ಪ್ರತಿಷ್ಠಾಪನೆ ಹೆಸರಲ್ಲಿ ಮುಖ್ಯರಸ್ತೆ ಬಂದ್ ಮಾಡುವುದು, ಸೇರಿ ಸಾರ್ವಜನಿಕರಿಗೆ ಸಂಚಾರ ಮಾಡಲು ಅಡಚಣೆ ಉಂಟಾಗದಂತೆ ಎಚ್ಚರವಹಿಸಬೇಕು. ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲು ಇಚ್ಚಿಸುವ ಸಂ&ಸಂಸ್ಥೆಗಳ ಪದಾಧಿಕಾರಿಗಳು ಕಡ್ಡಾಯವಾಗಿ ಗ್ರಾಪಂ , ನಗರಸಭೆ, ಬೆಸ್ಕಾಂ ಹಾಗು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವುದು, ಆಯಾ ಇಲಾಖೆಯವರು ನೀಡುವ ಸೂಚನೆಗಳನ್ನು ಪಾಲಿಸಬೇಕು. ಮೂರ್ತಿ ಇಡುವ ಸ್ಥಳಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಅನುಮತಿ ಪಡೆಯದೇ ಪ್ರತಿಷ್ಠಾಪನೆ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ನಾಗರಿಕರ ಭಾವನೆಗಳಿಗೆ ಧಕ್ಕೆಯುಂಟಾಗದಂತೆ ಹಬ್ಬಗಳನ್ನು ಆಚರಿಸಲು ಗಣೇಶ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ವ್ಯವಸ್ಥಾಪನಾ ಸಮಿತಿ ರಚಿಸಿಕೊಳ್ಳಬೇಕು. ಸಮಿತಿ ಎಲ್ಲ ಸದಸ್ಯರ ವಿಳಾಸ ಸೇರಿ ದೂರವಾಣಿ ಸಂಖ್ಯೆ ಇಲಾಖೆಗೆ ನೀಡಬೇಕು ಎಂದರು.
ತಾಪಂ ಇಒ ಆರ್.ಹೇಮಾವತಿ, ನಗರಸಭೆ, ಬೆಸ್ಕಾಂ, ಕಂದಾಯ ಇಲಾಖೆ ಸಿಬ್ಬಂದಿ ಮತ್ತು ತಾಲೂಕಿನ ವಿವಿಧ ಗಣೇಶ ಮಂಡಳಿ ಆಯೋಜಕರು ಇದ್ದರು.