- ವರದಿ ಸಲ್ಲಿಸಲು ಗೃಹ ಇಲಾಖೆ ಕಾರ್ಯದರ್ಶಿಗೆ ಹೈಕೋರ್ಟ್ ಆದೇಶ
- ಆವ್ಯವಸ್ಥೆ ಬಗ್ಗೆ ನ್ಯಾಯಾಲಯದ ಅಸಮಾಧಾನ
ಬೆಂಗಳೂರು:
ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ 24 ಗಂಟೆಗಳ ಕಾಲ ಸಿಸಿ ಕ್ಯಾಮರಾ ಕಾರ್ಯನಿರ್ವಹಣೆಯಲ್ಲಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಗೃಹ ಇಲಾಖೆ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಆರ್ಟಿಐ ಅಡಿ ಕೋರಿದ ಮಾಹಿತಿ ನಿರಾಕರಿಸಿದ್ದ ಮಾಹಿತಿ ಆಯೋಗದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ವೈಟ್ಫೀಲ್ಡ್ ಠಾಣೆಯ ಸಿಟಿ ಕ್ಯಾಮರಾ ದೃಶ್ಯಾವಳಿಗಳ ಲಭ್ಯತೆ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರಿಗೆ ನ್ಯಾಯಪೀಠ ಸೂಚಿಸಿತ್ತು. ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜಾರಾಗಿದ್ದ ಎಸಿಪಿ ರೀನಾ ಸುವರ್ಣ, ವಿದ್ಯುತ್ ಸಮಸ್ಯೆಯಿಂದಾಗಿ ದೃಶ್ಯಾವಳಿಗಳು ಲಭ್ಯವಿಲ್ಲ ಎಂದು ತಾಂತ್ರಿಕ ತಂಡ ತಿಳಿಸಿದೆ ಎಂದು ಹಿಂದಿನ ವಿಚಾರಣೆ ವೇಳೆ ಉತ್ತರಿಸಿದ್ದರು.
ಆದ್ದರಿಂದ ವೈಟ್ಫೀಲ್ಡ್ ಠಾಣೆಗೆ ಸಂಬಂಧಿಸಿ ಯುಪಿಎಸ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲು ಕಾಲಾವಕಾಶ ನೀಡಲಾಗಿತ್ತು. ಗುರುವಾರ ಮಾಹಿತಿ ಸಲ್ಲಿಸಿದ್ದ ಸರ್ಕಾರದ ಪರ ವಕೀಲರು, 11 ತಿಂಗಳ ಕಾಲ ವೈಟ್ಫಿಲ್ಡ್ ಠಾಣೆಯ ಯುಪಿಎಸ್ ವ್ಯವಸ್ಥೆ ಸರಿಯಿರಲಿಲ್ಲ ಎಂದು ಉತ್ತರಿಸಿದ್ದರು. ಇದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಪೀಠ, ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂನೆಯಲ್ಲದೆ ಮತ್ತೇನು ಎಂದು ಪ್ರಶ್ನಿಸಿತು. ಎಲ್ಲ ಠಾಣೆಗಳಲ್ಲಿ ಸಿಸಿ ಕ್ಯಾಮರಾ ಇದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಅದೊಂದು ಔಪಚಾರಿಕ ವ್ಯವಸ್ಥೆಯಲ್ಲ. ಪೊಲೀಸ್ ದೌರ್ಜನ್ಯ ತಡೆಗಟ್ಟಲು ಅವಶ್ಯಕ ಸಾಧನ. ಕೇವಲ ಅಳವಡಿಸಿದ್ದರೆ ಸಾಲದು, ಕಾರ್ಯಾಚರಣೆಯಲ್ಲಿಯೂ ಇರಬೇಕು ಎಂದು ಹೇಳಿತು. ಮುಂದಿನ ವಿಚಾರಣೆ ಸೆ.7ಕ್ಕೆ ನಿಗದಿಯಾಗಿದೆ.
ಮಹಿಳೆಯ ಆಕ್ರೋಶ:
ಪೊಲೀಸರ ಉತ್ತರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅರ್ಜಿದಾರ ಮಹಿಳೆ, ಪೊಲೀಸರು ನ್ಯಾಯಾಲಯದ ಮುಂದೆಯೇ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಪೊಲೀಸ್ ಠಾಣೆಯಲ್ಲಿ ನನ್ನ ಖಾಸಗಿ ಅಂಗಕ್ಕೆ ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ಈಗ ಆ ದಾಖಲೆಗಳನ್ನು ಕೊಟ್ಟರೆ ನಿಜ ಬೆಳಕಿಗೆ ಬರುತ್ತದೆ ಎಂದು ನೆಪ ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಟನೆಗಳು 2024ರಲ್ಲಿ ಆಗಿದೆ. ನೀವು ಆಗಲೇ ನ್ಯಾಯಾಲಯಕ್ಕೆ ಬಂದಿದ್ದರೆ, ನಾವು ಸೂಕ್ತ ಆದೇಶ ಮಾಡುತ್ತಿದ್ದೆವು ಎಂದು ಹೇಳಿತು. ಅದಕ್ಕೆ ಉತ್ತರಿಸಿದ ಮಹಿಳೆ, ನಾನು ಆರ್ಟಿಐ ಅರ್ಜಿ ಸಲ್ಲಿಸಿದ್ದೆ. ಆ ಪ್ರಕ್ರಿಯೆಗಳೆಲ್ಲ ಮುಗಿದು ಇಲ್ಲಿಗೆ ಬರುವಾಗ ತಡವಾಯಿತು ಎಂದು ಉತ್ತರಿಸಿದರು.
⚠️
ಪ್ರಸ್ತುತ ನಿಯಮವೇನಿದೆ?
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯವಾಗಿದೆ. 3 ತಿಂಗಳುಗಳ ಕಾಲ ಸಿಸಿ ಕ್ಯಾಮರಾ ದಾಖಲೆಗಳನ್ನು ಕಾಯ್ದಿರಿಸಬೇಕು. ನಂತರ ಅದನ್ನು ಕ್ಲೌಡ್ ಸರ್ವಿಸ್ ಗೆ ಅಪ್ಲೋಡ್ ಮಾಡಬೇಕು. ಕೋರ್ಟ್ ಕೇಳಿದಾಗ ಪೊಲೀಸರು ಯಾವುದೇ ನೆಪ ಹೇಳದೆ ನೀಡಬೇಕು ಎಂಬ ನಿಯಮಗಳು ಇವೆ. ಆದರೆ, ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.