- ಡಾ.ಪುರುಷೋತ್ತಮ ಬಿಳಿಮಲೆ ವಿಷಾದ
- ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಆಗ್ರಹ
ಬೆಂಗಳೂರು: ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿಐಐಎಲ್) ವತಿಯಿಂದ ಕನ್ನಡ ವಿದ್ವಾಂಸರಿಗೆ ಪ್ರಶಸ್ತಿ ನೀಡಲು ವಿಳಂಬ ಮಾಡುತ್ತಿದ್ದು, ಇದು ಕೇಂದ್ರ ಸರ್ಕಾರವು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಕನ್ನಡ ಭಾಷೆಯ ಅಧ್ಯಯನ, ಸಂಶೋಧನೆ ಮತ್ತು ಪ್ರಚಾರಕ್ಕಾಗಿ ಮೈಸೂರಿನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನವು ಪ್ರತಿ ವರ್ಷ ನೀಡಬೇಕಾದ ಪ್ರಶಸ್ತಿಗಳನ್ನು ನಿಯಮಿತವಾಗಿ ನೀಡದೆ ಕನ್ನಡ ಭಾಷೆಗೆ ನಿರಂತರವಾಗಿ ಅನ್ಯಾಯ ಎಸಗುತ್ತಿದೆ. ಕಳೆದ ವರ್ಷ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ ಈ ವಿಷಯ ಬಗ್ಗೆ ಚರ್ಚಿಸಿದಾಗ, ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಫಲಿತಾಂಶ ದೊರಕಿಲ್ಲ ಎಂದಿದ್ದಾರೆ.
ಕೊನೆಯ ಬಾರಿ 2019ರಲ್ಲಿ ಸಿಐಐಎಲ್ ಅಧ್ಯಕ್ಷೀಯ, ಮಹರ್ಷಿ ಬಾದರಾಯಣ, ವ್ಯಾಸ ಸಮ್ಮಾನ್‌ನಂತಹ ವಿವಿಧ ಪ್ರಶಸ್ತಿಗಳನ್ನು ನೀಡಿತ್ತು. ಆ ನಂತರದಲ್ಲಿ ಏಳು ವರ್ಷಗಳು ಕಳೆದರೂ ಆ ಪ್ರಕ್ರಿಯೆ ಆರಂಭಿಸಿಲ್ಲ. ಇದನ್ನು ನೋಡಿದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಅರ್ಹರೇ ಇಲ್ಲ ಎನ್ನುವ ತೀರ್ಮಾನಕ್ಕೆ ಸಂಸ್ಥೆ ಬಂದಿರಬಹುದೇ ಎಂಬ ಸಂದೇಹ ಮೂಡಿದೆ. ಕನ್ನಡ ಸಾಹಿತ್ಯ, ಸಂಶೋಧನಾ ಕ್ಷೇತ್ರವನ್ನು ಈ ರೀತಿ ನಿರ್ಲಕ್ಷಿಸುವ ಮೂಲಕ ಕೇಂದ್ರ ಸರ್ಕಾರ ಒಕ್ಕೂಟ ತತ್ವಗಳಿಗೆ ನಿರಂತರವಾಗಿ ಅಗೌರವ ತೋರುತ್ತಿದೆ ಎಂದು ಬಿಳಿಮಲೆ ಆರೋಪಿಸಿದ್ದಾರೆ.