ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ರಿಟ್ ಅರ್ಜಿ
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಸಾಂತ್ಯಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ರಿಟ್ ಅರ್ಜಿ ಸಲ್ಲಿಸಲು ಕಾವೇರಿ ನದಿ ರಕ್ಷಣಾ ಸಮಿತಿ ಸರ್ವಾನುಮತದಿಂದ ತೀರ್ಮಾನ ತೆಗೆದುಕೊಂಡಿದೆ.
ಆರ್.ಟಿ. ನಗರದಲ್ಲಿರುವ ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎನ್.ಗೋಪಾಲಗೌಡರ ಕಚೇರಿಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ರಿಟ್ ಅರ್ಜಿ ಸಲ್ಲಿಸುವುದಕ್ಕೆ ತಗಲುವ ಶುಲ್ಕ ಭರಿಸುವುದಾಗಿ ಭರವಸೆ ನೀಡಿದ್ದಾರೆ.
ಹೈಕೋರ್ಟ್‌ನ ಹಿರಿಯ ವಕೀಲರು, ನಿವೃತ್ತ ಐಎಎಸ್, ಐಪಿಎಸ್, ಐಆರ್‌ಎಸ್ ಅಧಿಕಾರಿಗಳು, ನೀರಾವರಿ ತಜ್ಞರು, ಕಾನೂನು ಸಲಹೆಗಾರರು, ವಿಧಾನಪರಿಷತ್ತಿನ ಮಾಜಿ ಸದಸ್ಯರು ಮತ್ತು ರೈತ ಸಂಘಟನೆಗಳ ಒಳಗೊಂಡ ತಂಡವು ಕಳೆದ ಏ.27ರಿಂದ ಏ.29ವರೆಗೆ ಕಾವೇರಿ ನದಿ ಪ್ರದೇಶಗಳಿಗೆ ಭೇಟಿ ಕೊಟ್ಟು ಸಂಗ್ರಹಿಸಿದ ತಾಂತ್ರಿಕ ಮಾಹಿತಿ ಮತ್ತು ಅಂಕಿ-ಅಂಶಗಳ ಬಗ್ಗೆ ಸಮಿತಿಯ ಅಧ್ಯಕ್ಷ ಎಚ್.ಕೆ. ರಾಮು ಸಭೆಯಲ್ಲಿ ವಿವರಿಸಿದರು. ಈ ವೇಳೆ ವಕೀಲ ಬ್ರಿಜೇಶ್ ಕಾಳಪ್ಪ ವಕಾಲತ್ತು ವಹಿಸಲು ಒಪ್ಪಿಕೊಂಡರು.
ಎಚ್.ಕೆ. ರಾಮು ಮಾತನಾಡಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ, ವಿಶ್ರಾಂತ ನ್ಯಾಯಮೂರ್ತಿ ಎನ್.ಗೋಪಾಲಗೌಡ ಮಾರ್ಗದರ್ಶನದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ರಿಟ್ ಅರ್ಜಿಯನ್ನು ಸಲ್ಲಿಸಲಾಗುವುದು. ತಮಿಳುನಾಡು ಮತ್ತು ಕರ್ನಾಟಕ ನಡುವೆ ದೀರ್ಘ ಕಾಲದಿಂದ ಕಾವೇರಿ ಜಲವಿವಾದ ನಡೆಯುತ್ತಲೇ ಇದೆ. ಹಿಂದಿನಿಂದಲೂ ಈ ಜಲವಿವಾದದಿಂದ ನಮಗೆ ಅನ್ಯಾಯವಾಗುತ್ತಿದೆ. ಈ ವಿವಾದವನ್ನು ಶಾಶ್ವತವಾಗಿ ಬಗೆಹರಿಸುವ ಕೆಲಸವಾಗಬೇಕಿದೆ ಎಂದರು.
ಮಾಜಿ ಎಂಎಲ್ಸಿಗಳಾದ ಕೆ.ತಿಪ್ಪೇಸ್ವಾಮಿ, ಅ.ದೇವೇಗೌಡ, ಡಿ.ಎಸ್. ವೀರಯ್ಯ, ನೀರಾವರಿ ತಜ್ಞ ವೆಂಕಟರಾಮು ಮತ್ತಿತರರಿದ್ದರು.
ಕಾನೂನು ಹೋರಾಟಕ್ಕೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹ ಮತ್ತು ಆರ್ಥಿಕ ನಿರ್ವಹಣೆ ಅತ್ಯಂತ ಪಾರದರ್ಶಕವಾಗಿರಬೇಕು.
- ನ್ಯಾ. ಎನ್. ಗೋಪಾಲಗೌಡ, ವಿಶ್ರಾಂತ ನ್ಯಾಯಮೂರ್ತಿ
ಕಾವೇರಿ ನೀರಾವರಿ ನಿಗಮದ ಏತ ನೀರಾವರಿ ಯೋಜನೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಆರಂಭಿಸಿದ್ದ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಕಾವೇರಿ ನದಿ ರಕ್ಷಣಾ ಸಮಿತಿಯು ಸರ್ಕಾರಕ್ಕೆ ಒತ್ತಡ ಹಾಕಬೇಕಿದೆ.
- ಟಿ. ತಿಮ್ಮೇಗೌಡ, ಐಎಎಸ್ ನಿವೃತ್ತ ಅಧಿಕಾರಿ