ಕಾವೇರಿ ಸಮಸ್ಯೆಗೆ ಪ್ರಕೃತಿಯಿಂದ ಪರಿಹಾರ: ಮೆಕೇದಾಟು ಯೋಜನೆಗಾಗಿ ಪ್ರಧಾನಿ ಬಳಿಗೆ ನಿಯೋಗ ಹೋಗಲು ಸರ್ವಪಕ್ಷ ಸಭೆಯಲ್ಲಿ ನಿರ್ಧಾರ! Cauvery All Party Meeting 
ರಾಜ್ಯ

ಕಾವೇರಿ ಸಮಸ್ಯೆಗೆ ಪ್ರಕೃತಿಯಿಂದ ಪರಿಹಾರ: ಮೆಕೇದಾಟು ಯೋಜನೆಗಾಗಿ ಪ್ರಧಾನಿ ಬಳಿಗೆ ನಿಯೋಗ ಹೋಗಲು ಸರ್ವಪಕ್ಷ ಸಭೆಯಲ್ಲಿ ನಿರ್ಧಾರ! Cauvery All Party Meeting

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಕರೆದಿದ್ದ ಸರ್ವಪಕ್ಷ ಸಭೆ ಯಶಸ್ವಿ ಮುಕ್ತಾಯ
  • ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಟ್ಟಾಗಿ ನಿಲ್ಲಲು ನಿರ್ಧಾರ
  • ವರುಣನ ಕೃಪೆಯಿಂದ ಕಾವೇರಿ ನೀರಿನ ಸಮಸ್ಯೆಗೆ ಪ್ರಕೃತಿಯಿಂದಲೇ ತಾತ್ಕಾಲಿಕ ಪರಿಹಾರ ಲಭಿಸಿರುವ ಸಮಾಧಾನಕರ ಸಂಗತಿ
  • ಮೇಕೆದಾಟು ಯೋಜನೆ ಅನುಷ್ಠಾನದ ಸಂಬಂಧ ಪ್ರಧಾನಮಂತ್ರಿಯನ್ನು ಭೇಟಿ ಮಾಡಲು ದೆಹಲಿಗೆ ಸರ್ವಪಕ್ಷ ನಿಯೋಗ ತೆರಳಲು ತೀರ್ಮಾನ
  • ರಾಜ್ಯದ ರೈತರ ಹಾಗೂ ಜನರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ಕಾವೇರಿ ನದಿ ನೀರಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ರೈತರು ಹಾಗೂ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕರೆದಿದ್ದ ಸರ್ವಪಕ್ಷ ಸಭೆ ( Kaveri All Party Meeting ) ಮುಕ್ತಾಯಗೊಂಡಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾವೇರಿ ವಿಚಾರದಲ್ಲಿ ಎಲ್ಲರೂ ಒಂದಾಗಿ ನಿಲ್ಲಬೇಕಾದ ಅನಿವಾರ್ಯತೆ ಹಾಗೂ ಸರ್ಕಾರದ ಮುಂದಿನ ಹೆಜ್ಜೆಗಳ ಕುರಿತು ಮುಖ್ಯಮಂತ್ರಿಗಳು ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ಚರ್ಚೆಯಾಗಿದೆ. ಪ್ರಸ್ತುತ ಕಾವೇರಿ ನೀರಿನ ಸಮಸ್ಯೆಯನ್ನು ಪ್ರಕೃತಿಯೇ ಪರಿಹರಿಸಿದ್ದು, ಮೆಕೇದಾಟು ಯೋಜನೆ ಸಂಬಂಧ ಪ್ರಧಾನಿ ಬಳಿಗೆ ಕರ್ನಾಟದ ಸರ್ವಪಕ್ಷ ನಿಯೋಗ ಹೋಗಲು ಸರ್ವ ಪಕ್ಷ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ತಿಳಿಸಿದ್ದಾರೆ.
ಕಾವೇರಿ ಸರ್ವಪಕ್ಷ ಸಭೆಯಲ್ಲಿ ಪ್ರಾಸ್ತಾವಿಕ ಮಾತಗಳನ್ನಾಡಿದ ಸಿಎಂ ಡಿಕೆಶಿ, ಕಾವೇರಿ ವಿವಾದ ನಮಗೆ ಹೊಸದಲ್ಲ, ನಾವು ಇದರೊಂದಿಗೆಯೇ ಬೆಳೆದಿದ್ದೇವೆ ಎಂದರು. ರಾಜಕೀಯಕ್ಕಿಂತ ರಾಜ್ಯದ ರೈತರು ಹಾಗೂ ಜನರ ಹಿತವೇ ತಮಗೆ ಅತ್ಯಂತ ಮುಖ್ಯ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಹಿತಾಸಕ್ತಿಯ ಪ್ರಶ್ನೆ ಬಂದಾಗಲೆಲ್ಲಾ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಟ್ಟಾಗಿ ನಿಂತಿರುವುದು ನಮ್ಮ ರಾಜ್ಯದ ಹೆಮ್ಮೆಯ ಚರಿತ್ರೆಯಾಗಿದೆ ಎಂದು ಸ್ಮರಿಸಿದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ ಮತ್ತು ನಂತರ ಕೃಷಿಗೆ ಒತ್ತು ನೀಡುವುದು ಸರ್ಕಾರದ ಪ್ರಮುಖ ನಿಲುವಾಗಿದೆ ಎಂದ ಸಿಎಂ, ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಪ್ರಾಧಿಕಾರ (CWMA) ಸಭೆಗಳಿಗೂ ಮುನ್ನವೇ ಕೇಂದ್ರ ಸಚಿವರಾದ ಸಿ.ಆರ್. ಪಾಟೀಲ್, ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ ಹಾಗೂ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾಗಿ ತಿಳಿಸಿದರು. ದೆಹಲಿಯಲ್ಲಿ ನಡೆದ ಸಂಸತ್ ಸದಸ್ಯರ ಸಭೆಯಲ್ಲೂ ಎಲ್ಲರೂ ಪಕ್ಷಾತೀತವಾಗಿ ರಾಜ್ಯದ ಪರ ಧ್ವನಿ ಎತ್ತಲು ಒಪ್ಪಿಗೆ ಸೂಚಿಸಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.

ತಮಿಳುನಾಡು ಮುಖ್ಯಮಂತ್ರಿಗಳು ಮಾತುಕತೆಗೆ ಬರುವುದಾಗಿ ತಿಳಿಸಿದ್ದರೂ, ಸದ್ಯದ ಕಾವೇರಿ ಪರಿಸ್ಥಿತಿ ತಿಳಿಯಾದ ನಂತರ ಬರುವಂತೆ ಅವರಿಗೆ ಸೂಚಿಸಲಾಗಿದೆ ಎಂದ ಮುಖ್ಯಮಂತ್ರಿಗಳು, ಸಮಾಧಾನಕರ ಸಂಗತಿಯೆಂದರೆ ವರುಣನ ಕೃಪೆಯಿಂದ ಮಳೆ ಚೆನ್ನಾಗಿ ಆಗುತ್ತಿದ್ದು ಪರಿಸ್ಥಿತಿ ಸುಧಾರಿಸುತ್ತಿದೆ ಎಂದರು. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಸೌಹಾರ್ದಯುತ ಬಗೆಹರಿಕೆಗೆ ಆದ್ಯತೆ ನೀಡಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಈಗಾಗಲೇ ಅಗತ್ಯ ನೀರನ್ನು ಸಂಗ್ರಹಿಸಿಡಲಾಗಿದೆ ಎಂದು ಮಾಹಿತಿ ನೀಡಿದರು.
ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ಒಳಹರಿವನ್ನು ಸಂಗ್ರಹಿಸಿಡಲು ಸಾಧ್ಯವಿಲ್ಲದ ಕಾರಣ ಸಹಜ ಹರಿವು ಮಾತ್ರ ಮುಂದುವರಿದಿದೆ. ಈಗಾಗಲೇ ನಾಲೆಗಳಿಗೂ ನೀರು ಹರಿಸಲಾಗಿದ್ದು, ರೈತರ ಬೆಳೆಗಳ ರಕ್ಷಣೆಗೂ ಕ್ರಮ ಕೈಗೊಳ್ಳಲಾಗಿದೆ. ತಮಿಳುನಾಡು 9.9 ಟಿಎಂಸಿ ನೀರು ಬಿಡುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಪ್ರಾಧಿಕಾರ ನೀಡಿದ್ದ ಸೂಚನೆ ವಿರುದ್ಧ ರಾಜ್ಯ ಸರ್ಕಾರ ಈಗಾಗಲೇ ಮೇಲ್ಮನವಿ ಸಲ್ಲಿಸಿದೆ ಎಂದು ಅವರು ವಿವರಿಸಿದರು.
ಕಾವೇರಿ ಮಾತ್ರವಲ್ಲದೆ ಕೃಷ್ಣಾ ನದಿ ನೀರಿನ ವಿಚಾರದಲ್ಲೂ ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ್ ಅವರು ರಾಜ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಸಿಎಂ ತಿಳಿಸಿದರು. ಅಂತಿಮವಾಗಿ, ರಾಜ್ಯದ ಹಿತವನ್ನು ಕಾಪಾಡುವ ಏಕೈಕ ಉದ್ದೇಶದಿಂದ ಸರ್ವಪಕ್ಷ ಸಭೆಗೆ ಆಗಮಿಸಿರುವ ಎಲ್ಲಾ ಹಿರಿಯ ನಾಯಕರಿಗೆ ಧನ್ಯವಾದ ಅರ್ಪಿಸಿದ ಅವರು, ಈ ಗಂಭೀರ ವಿಷಯದ ಕುರಿತು ಸಭೆಯಲ್ಲಿ ಎಲ್ಲರ ಮುಕ್ತ ಸಲಹೆಗಳನ್ನು ಆಹ್ವಾನಿಸುವುದಾಗಿ ತಿಳಿಸಿದರು.

ಮೇಕೆದಾಟಿಗಾಗಿ ಸರ್ವಪಕ್ಷ ನಿಯೋಗ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸದ್ಯ ವರುಣನ ಕೃಪೆಯಿಂದ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗುತ್ತಿರುವುದರಿಂದ ಪ್ರಕೃತಿಯೇ ಒಂದು ರೀತಿಯಲ್ಲಿ ತಾತ್ಕಾಲಿಕ ಪರಿಹಾರ ಒದಗಿಸಿಕೊಟ್ಟಂತಾಗಿದೆ ಎಂದು ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿಕೆಶಿ ಹೇಳಿದರು. ಇದರ ಜತೆಗೆ, ಶಾಶ್ವತ ಪರಿಹಾರ ಹಾಗೂ ಕುಡಿಯುವ ನೀರಿನ ಕೊರತೆ ನೀಗಿಸಲು ಅತ್ಯಂತ ಮಹತ್ವದ್ದಾಗಿರುವ ಮೇಕೆದಾಟು ಯೋಜನೆ ಅನುಷ್ಠಾನದ ಸಂಬಂಧ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲು ರಾಜ್ಯದ ವತಿಯಿಂದ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲು ಇಂದಿನ ಸರ್ವಪಕ್ಷ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.

ಪತ್ರ ಬರೆದ ಮಾಜಿ ಪ್ರಧಾನಿ ಎಚ್​ಡಿಡಿ

ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿರುವ ಸರ್ವಪಕ್ಷ ಸಭೆಗೆ ತಮ್ಮನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದ ತಿಳಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು,​ ವೈಯಕ್ತಿಕ ಹಾಗೂ ಆರೋಗ್ಯ ಸಂಬಂಧಿತ ಕಾರಣಗಳಿಂದಾಗಿ ಇಂದು ನಡೆಯಲಿರುವ ಸರ್ವಪಕ್ಷ ಸಭೆಗೆ ಖುದ್ದಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶದ ರೈತರ, ಜನರ ನೀರಿನ ಹಕ್ಕುಗಳನ್ನು ರಕ್ಷಿಸುವ ಮತ್ತು ರಾಜ್ಯದ ಹಿತಾಸಕ್ತಿ ಕಾಯುವ ಸರ್ಕಾರದ ಕಾನೂನಾತ್ಮಕ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಎಚ್​ಡಿಡಿ ಘೋಷಣೆ ಮಾಡಿದ್ದು, ​ಸಭೆಯಲ್ಲಿ ಜಾತ್ಯತೀತ ಜನತಾದಳ (JDS) ಪಕ್ಷದ ಪರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ಶಾಸಕರು ಭಾಗವಹಿಸಲಿದ್ದಾರೆ ಎಂದು ಎಚ್​ಡಿಡಿ ಸ್ಪಷ್ಟನೆ ನೀಡಿದ್ದಾರೆ.

ಸರ್ವಪಕ್ಷ ಸಭೆಯು ಅತ್ಯಂತ ಫಲಪ್ರದ

ರಾಜ್ಯದ ಹಿತವನ್ನು ಕಾಪಾಡುವ ಉದ್ದೇಶದಿಂದ ಮುಖ್ಯಮಂತ್ರಿಗಳು ಕರೆದಿದ್ದ ಸರ್ವಪಕ್ಷ ಸಭೆಯು ಅತ್ಯಂತ ಫಲಪ್ರದವಾಗಿದ್ದು, ಎರಡು ರಾಜ್ಯಗಳ ನಡುವೆ ಕಾವೇರಿ ನೀರಿನ ಶಾಶ್ವತ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಗಂಭೀರ ಚರ್ಚೆ ನಡೆದಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರವೂ ಇದಕ್ಕೆ ಸಕಾರಾತ್ಮಕವಾಗಿ ಸಹಮತ ವ್ಯಕ್ತಪಡಿಸಿದ್ದು, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ಜತೆಗೆ ನೆರೆ ರಾಜ್ಯದ ಪರಿಸ್ಥಿತಿಯ ಮೇಲೂ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ ಎಂದ ಅವರು, ಮುಂಗಡ ಮತ್ತು ಹಿಂಗಾರು ಹಂಗಾಮಿನಲ್ಲಿ ಮೊದಲ, ಎರಡನೇ ಹಾಗೂ ಮೂರನೇ ಬೆಳೆಗೆ ಹಂಚಿಕೆಯಾಗಬೇಕಾದ ನೀರಿನ ಪ್ರಮಾಣದ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು. ಪ್ರಸ್ತುತ ಪ್ರಕೃತಿಯ ಕೃಪೆಯಿಂದ ರಾಜ್ಯದಲ್ಲಿ ವಾತಾವರಣವು ತಿಳಿಯಾಗಿರುವ ಸಮಾಧಾನಕರ ಸಂಗತಿಗಳ ಕುರಿತು ಮುಖ್ಯಮಂತ್ರಿಗಳೇ ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸುತ್ತಾ, ಸಿಎಂ ಕರೆದಿರುವ ಈ ಇಂದಿನ ಸಭೆಯು ಸಂಪೂರ್ಣ ಸಮರ್ಪಕವಾಗಿದೆ ಎಂದು ವಿ. ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಯಾರೆಲ್ಲ ಇದ್ದರು?

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಭೈರೇಗೌಡ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ನವದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಸಂಸತ್ ಸದಸ್ಯ ಗೋವಿಂದ ಕಾರಜೋಳ, ವಿಪಕ್ಷದ ನಾಯಕ ಅಶೋಕ್, ಚಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಎಚ್.ಕೆ.ಪಾಟೀಲ್, ಬಿ.ಕೆ.ಹರಿಪ್ರಸಾದ್, ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ್, ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮುಖ್ಯಮಂತ್ರಿಯವರ ವಿಶೇಷ ಸಲಹೆಗಾರ ಜಿ.ಸಿ.ಚಂದ್ರಶೇಖರ್, ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.