ವಿಜಯಪುರದ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸೈಬರ್ ಕ್ರೈಂ ಸುರಕ್ಷತೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಂ.ಎಂ. ಕುರುವಿನಶೆಟ್ಟಿ, ವೈ. ತಮ್ಮಣ್ಣ, ಎ.ಎಚ್. ಪಾಟೀಲ ಮತ್ತಿತರರಿದ್ದಾರೆ.
- ಸೈಬರ್ ಕ್ರೈಂನ ಪೊಲೀಸ್ ಅಧಿಕಾರಿ ಎಂ.ಎಂ. ಕುರುವಿನಶೆಟ್ಟಿ ಸಲಹೆ
- ಸೈಬರ್ ಕ್ರೈಂ ಸುರಕ್ಷತ ಕಾರ್ಯಕ್ರಮ
- ಉಪನ್ಯಾಸ
ವಿಜಯಪುರ : ಸಾಮಾಜಿಕ ಮಾಧ್ಯಮ ಗಳಲ್ಲಿ ನಕಲಿ ಖಾತೆಯನ್ನು ಸೃಷ್ಟಿಸುವ ಮೂಲಕ ವಿದ್ಯಾರ್ಥಿಗಳನ್ನು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಸೈಬರ್ ಅಪರಾಧಿಗಳು ವಂಚಿಸುವ ಪ್ರಕರಣ ಗಳು ಹೆಚ್ಚುತ್ತಿದ್ದು, ವಿದ್ಯಾರ್ಥಿನಿಯರು ಅದಕ್ಕೆ ಭಯಪಡದೆ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಲು ಮುಂದಾಗಬೇಕು ಎಂದು ಸೈಬರ್ ಕ್ರೈಂನ ಪೊಲೀಸ್ ಅಧಿಕಾರಿ ಎಂ.ಎಂ. ಕುರುವಿನಶೆಟ್ಟಿ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯ, ಐಕ್ಯೂಎಸಿ ಸಹಯೋಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಇತ್ತೀಚೆಗೆ ಹಮ್ಮಿಕೊಂಡಿದ್ದ ಸೈಬರ್ ಕ್ರೈಂ ಸುರಕ್ಷತ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಯುವ ಪೀಳಿಗೆಯು ಅಪಾಯದಲ್ಲಿ ಸಿಲುಕುತ್ತಿದೆ ಎಂಬುವುದರ ಕುರಿತು ಉದಾಹರಣೆಗಳ ಜತೆಗೆ ವಿವರಿಸಿದರು.
ಸೈಬರ್ ವಿಭಾಗದ ಅಧಿಕಾರಿ ಎ.ಎಚ್. ಪಾಟೀಲ ಮಾತನಾಡಿ, ಇಂಟರ್‌ನೆಟ್ ಮತ್ತು ಸ್ಮಾರ್ಟ್‌ಪೋನ್‌ಗಳ ಬಳಕೆ ಹೆಚ್ಚಾದಂತೆ ಸೈಬರ್ ಅಪರಾಧಗಳ ಸಂಖ್ಯೆಯೂ ತೀವ್ರವಾಗಿ ಹೆಚ್ಚುತ್ತಿದೆ. ಡಿಜಿಟಲ್ ಜಗತ್ತಿನಲ್ಲಿ ನಮ್ಮ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ಸುರಕ್ಷಿತವಾಗಿಡುವುದು ಅತ್ಯಂತ ದೊಡ್ಡ ಸವಾಲಾಗಿದೆ ಎಂದರು.
ಪ್ರಾಚಾರ್ಯ ವೈ. ತಮ್ಮಣ್ಣ ಮಾತನಾಡಿ, ಇಂದಿನ ತಂತ್ರಜ್ಞಾನ ಆಧಾರಿತ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿ ಸಮುದಾಯವು ಸಾಮಾಜಿಕ ಮಾಧ್ಯಮಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಹೀಗಾಗಿ, ವಿದ್ಯಾರ್ಥಿಗಳಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.
ಚಂದ್ರಕಲಾ ದೊಡಮನಿ ಸ್ವಾಗತಿಸಿ, ಪರಿಚಯಿಸಿದರು. ಅಕ್ಷತಾ ಗೆರಡೆ ಪ್ರಾರ್ಥಿಸಿದರು. ಕೀರ್ತಿ ಕುಂಚನೂರು ತಂಡದವರು ಮಹಿಳಾ ಗೀತೆ ಹಾಡಿದರು. ಸುನೀಲಕುಮಾರ ಯಾದವ ನಿರೂಪಿಸಿದರು. ಸೌಜನ್ಯ ಬೀಳಗಿ ವಂದಿಸಿದರು.
ಆರ್.ಡಿ. ಅಂಜುಟಗಿ, ರಶ್ಮಿ ಧನಗೊಂಡ ಮತ್ತಿತರರಿದ್ದರು.