ಟ್ರೆಕ್ಕಿಂಗ್​ ತಾಣಗಳು  
ರಾಜ್ಯ

ಚಾರಣ ತಾಣಗಳಲ್ಲಿ ಎಚ್ಚರಿಕೆ ಹೆಜ್ಜೆ! ಅರಣ್ಯ ಇಲಾಖೆಯಿಂದ ತೀವ್ರ ನಿಗಾ

ಮೋಹನ್​ ಶೆಟ್ಟಿ

ಬೆಂಗಳೂರು: ಬೆಟ್ಟಗುಡ್ಡಗಳ ಸಾಲಿನಲ್ಲಿ ಆವೃತವಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿನ ಚಾರಣ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸಿರುವ ಜಿಲ್ಲಾ ಅರಣ್ಯ ಇಲಾಖೆ ತೀವ್ರ ನಿಗಾವಹಿಸಲಿದ್ದು, ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ.

ಸಮುದ್ರ ಮಟ್ಟದಿಂದ 1,112 ಮೀ ಎತ್ತರದಲ್ಲಿರುವ ಮಾಕಳಿದುರ್ಗ ಹಾಗೂ ಸಮುದ್ರ ಮಟ್ಟದಿಂದ 1,186 ಮೀ ಎತ್ತರದಲ್ಲಿರುವ ಹುಲುಕುಡಿ ಬೆಟ್ಟ ಜಿಲ್ಲೆಯಲ್ಲಿನ ಪ್ರಮುಖ ಎರಡು ಚಾರಣ ತಾಣಗಳಾಗಿದ್ದು, ಇವೆರಡೂ ಸ್ಥಳಗಳಿಗೆ ಹೆಚ್ಚು ಚಾರಣಪ್ರಿಯರು ಆಗಮಿಸುತ್ತಾರೆ. ವಾರಾಂತ್ಯಗಳಲ್ಲಿ ನೂರಾರು ಪ್ರವಾಸಿಗರು ಆಗಮಿಸುವುದರಿಂದ ಸುರಕ್ಷತೆ ದೃಷ್ಟಿಯಿಂದ ಯಾವುದೇ ಅಪಾಯ ಎದುರಾಗದಂತೆ ಮುಂಜಾಗ್ರತೆ ವಹಿಸಲು ಅರಣ್ಯ ಇಲಾಖೆ ಕೆಲ ಕ್ರಮಕೈಗೊಂಡಿದೆ.

ಪ್ರಮುಖವಾಗಿ ಸುಮಾರು 25 ಮಂದಿಗೆ ಒಬ್ಬರಂತೆ ಗೈಡ್ ನೇಮಿಸುವುದು, ಚಾರಣದ ವೇಳೆ ಗಾಯಗೊಂಡರೆ ತಕ್ಷಣ ಪ್ರಥಮ ಚಿಕಿತ್ಸೆ ದೊರಕಿಸಿಕೊಡುವುದು, ಮೊಬೈಲ್ ಸಿಗ್ನಲ್ ಸಮಸ್ಯೆ ಎದುರಾಗುವ ಅಪಾಯದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ವಾಕಿಟಾಕಿ ವ್ಯವಸ್ಥೆ ಸೇರಿ ಚಾರಣ ತಾಣಗಳಲ್ಲಿ ಸಿಬ್ಬಂದಿ ರಕ್ಷಣೆಗೆ ಆದ್ಯತೆ ನೀಡುವಂತ ವ್ಯವಸ್ಥೆಗೆ ಇಲಾಖೆ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಚಾರಣದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿಕೊಂಡಿರುವ ಯುವಜನತೆ ಚಾರಣ ತಾಣಗಳತ್ತ ದೌಡಾಯಿಸುತ್ತಿದ್ದಾರೆ. 

ಅದರಲ್ಲೂ ವಾರಾಂತ್ಯದ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುತ್ತಿದೆ. ಆದರೆ ಬೆಟ್ಟಗುಡ್ಡಗಳನ್ನು ಹತ್ತುವ ಉತ್ಸಾಹದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕೆಲವೊಂದು ಸಂದರ್ಭಗಳಲ್ಲಿ ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ತಂದುಕೊಳ್ಳುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಾರಣದ ಮೋಜು ಅಪಾಯಕ್ಕೆ ದಾರಿ ಮಾಡಿಕೊಡಬಾರದು ಎಂಬುದು ಇಲಾಖೆಯ ಸದುದ್ದೇಶವಾಗಿದೆ.

ಅಹಿತಕರ ಘಟನೆಗಳಿಂದ ಎಚ್ಚೆತ್ತ ಇಲಾಖೆ: ರಾಜ್ಯದ ಕೆಲವು ಚಾರಣ ತಾಣಗಳಲ್ಲಿ ಸಂಭವಿಸಿದ ಅಹಿತಕರ ಘಟನೆಗಳಿಂದ ಎಚ್ಚೆತ್ತ ಇಲಾಖೆ ಜಿಲ್ಲೆಯಲ್ಲಿನ ಚಾರಣ ತಾಣಗಳಲ್ಲಿ ಇಂಥ ಘಟನೆಗಳು ನಡೆಯಬಾರದು ಎಂಬ ನಿಟ್ಟಿನಲ್ಲಿ ಕೆಲ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ರಾಜ್ಯದ ಇನ್ನಿತರ ಕಡೆಗಳಲ್ಲಿನ ಚಾರಣ ತಾಣಗಳಲ್ಲಿ ವಿಧಿಸಿರುವ ನಿಯಮಗಳನ್ನು ಜಿಲ್ಲೆಯಲ್ಲಿನ ತಾಣಗಳಲ್ಲೂ ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆ ಅಧಿಕಾರಿಗಳು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ನಿತ್ಯ 200 ಮಂದಿ ಪ್ರವಾಸಿಗರಿಗೆ ಮಾತ್ರ ನೋಂದಣಿಯೊಂದಿಗೆ ಚಾರಣಕ್ಕೆ ಅವಕಾಶ ನೀಡಲಾಗುತ್ತಿದೆ. ಹೆಚ್ಚುವರಿ ಮಂದಿಗೆ ಚಾರಣಕ್ಕೆ ಅವಕಾಶ ನೀಡುವುದನ್ನು ಇಲಾಖೆ ನಿರ್ಬಂಧಿಸಿದೆ. ಇದರಿಂದ ಚಾರಣಿಗರ ಚಲನವಲನಗಳ ಬಗ್ಗೆ ಅಲ್ಲಿನ ಸಿಬ್ಬಂದಿ ಗಮನಹರಿಸಲು ಸಾಧ್ಯವಾಗಲಿದೆ.

ಮಳೆಗಾಲದಲ್ಲಿ ಹಸಿರು ಹೊದಿಕೆ

ರಾಜಧಾನಿ ಬೆಂಗಳೂರಿನ ಗಡಿ ಹಂಚಿಕೊಂಡಿರುವ ಕೇವಲ 50 ಕಿ.ಮೀ ಅಂತರದಲ್ಲಿರುವ ಈ ಚಾರಣ ತಾಣಗಳು ಟ್ರೆಕ್ಕಿಂಗ್​ಪ್ರಿಯರಿಗೆ ಆಸಕ್ತಿದಾಯಕ ತಾಣಗಳಾಗಿ ಗುರುತಿಸಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ನೆರೆ ಜಿಲ್ಲೆಗಳಿಂದ ನೂರಾರು ಪ್ರವಾಸಿಗರು ದೌಡಾಯಿಸುತ್ತಿದ್ದಾರೆ. ಬೇಸಿಗೆಯಲ್ಲಿ ಬಂಡೆಕಲ್ಲುಗಳಿಂದ ಆವೃತವಾಗಿರುವ ತಾಣ ಕಂಡುಬಂದರೆ ಮಳೆಗಾಲ ಆರಂಭವಾಗುತ್ತಿದ್ದಂತೆ ಹಸಿರು ಹೊದ್ದು, ಮಲಗಿದಂತೆ ಭಾಸವಾಗುತ್ತದೆ. ಬೆಟ್ಟಗಳನ್ನು ಏರಲು ಸೂಕ್ತ ಮೆಟ್ಟಿಲು, ರೇಲಿಂಗ್ ವ್ಯವಸ್ಥೆ ಇದೆ. ಆದರೂ ಮಳೆಗಾಲದಲ್ಲಿ ಆಯತಪು್ಪವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಬ್ಬಂದಿಗೆ ಇಲಾಖೆ ಸೂಚನೆ ರವಾನಿಸಿದೆ.

ಜಿಲ್ಲೆಯಲ್ಲಿ ಮಾಕಳಿದುರ್ಗ ಹಾಗೂ ಹುಲುಕುಡಿ ಬೆಟ್ಟ ಪ್ರಮುಖ ಚಾರಣ ತಾಣಗಳಾಗಿದ್ದು, ಚಾರಣಿಗರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಅರಣ್ಯ ಇಲಾಖೆಯ ತಂತ್ರಾಂಶದಲ್ಲಿ ನೋಂದಣಿಯ ಮೂಲಕ ಮಾತ್ರ ಚಾರಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗೈಡ್​ಗಳ ನಿಯೋಜನೆ 200 ಜನಕ್ಕೆ ಮಾತ್ರ ನೋಂದಣಿ, ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ಸೇರಿ ಕೆಲವೊಂದು ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ.

| ಸಂತೋಷ್ ಕುಮಾರ್ ಡಿಎಫ್​ಒ, ಅರಣ್ಯ ಇಲಾಖೆ

ತುರ್ತು ಪ್ರಥಮ ಚಿಕಿತ್ಸೆ ವ್ಯವಸ್ಥೆ

ಮಾಕಳಿ ಬೆಟ್ಟ, ಹುಲುಕುಡಿ ಬೆಟ್ಟದ ಹಲವೆಡೆ ಮಳೆಗಾಲದಲ್ಲಿ ಬಂಡೆಗಳಲ್ಲಿ ಜಾರುವ ಸಾಧ್ಯತೆ ಹೆಚ್ಚು. ಪ್ರತಿ ಚಾರಣಿಗರ ತಂಡದಲ್ಲೂ ಗೈಡ್​ಗಳು ಇರುತ್ತಾರೆ. ಆದರೂ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಗಾಗಿ ಅಗತ್ಯ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಚಾರಣದ ವೇಳೆಯಲ್ಲಿ ಪ್ರವಾಸಿಗರ ಸುರಕ್ಷತೆಗೆ ವಾಕಿಟಾಕಿ ವ್ಯವಸ್ಥೆ ಕಲ್ಪಿಸಲು ಇಲಾಖೆ ಚಿಂತನೆ ನಡೆಸಿದೆ.