ಬೊಮ್ಮಶೆಟ್ಟಹಳ್ಳಿ ಹಿತ ಚಿಂತನಾ ಪಬ್ಲಿಕ್​ ಶಾಲೆಯಲ್ಲಿ ಉಚಿತ ಕಾರು ಹಾಗೂ ದ್ವಿಚಕ್ರ ವಾಹನ ತರಬೇತಿಗೆ ಟ್ರಸ್ಟಿ ವಿ.ರಾಮಸ್ವಾಮಿ ಚಾಲನೆ ನೀಡಿದರು. ಶಾಲೆ ಕಾರ್ಯದರ್ಶಿ ರಮೇಶ್​, ಮುಖ್ಯಶಿಕ್ಷಕ ಗಿರೀಶ್​.ವಿ.ಗನವಟಕರ್​, ಸಹ ಮುಖ್ಯಶಿಕ್ಷಕಿ ದರ್ಶಿನಿ ಉಪಸ್ಥಿತರಿದ್ದರು.  
ರಾಜ್ಯ

ಗ್ರಾಮೀಣ ಮಹಿಳೆಯರಿಗೆ ಕಾರು, ಬೈಕ್​ ಚಾಲನಾ ತರಬೇತಿ / NELAMANGAL

ನೆಲಮಂಗಲ : ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಸ್ವ&ಉದ್ಯೋಗಿಗಳನ್ನಾಗಿ ಮಾಡುವ ಉದ್ದೇಶದಿಂದ ಹಿತ ಚಿಂತನಾ ಚಾರಿಟಬಲ್​ ಟ್ರಸ್ಟ್​ನಿಂದ ಉಚಿತವಾಗಿ ಚಾಲನಾ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್​ ವ್ಯವಸ್ಥಾಪಕ ಟ್ರಸ್ಟಿ ವಿ.ರಾಮಸ್ವಾಮಿ ತಿಳಿಸಿದರು.
ಗೊಲ್ಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೊಮ್ಮಶೆಟ್ಟಹಳ್ಳಿ ಹಿತ ಚಿಂತನಾ ಪಬ್ಲಿಕ್​ ಶಾಲೆಯಲ್ಲಿ ಟ್ರಸ್ಟ್​ನಿಂದ ಮಹಿಳೆಯರಿಗೆ ಆಯೋಜಿಸಿದ್ದ ಉಚಿತವಾಗಿ ಕಾರು ಹಾಗೂ ದ್ವಿಚಕ್ರ ವಾಹನ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಸಾಕಷ್ಟು ಕಂಪನಿಗಳು ಆರಂಭಗೊಂಡಿದ್ದು, ವಾಹನ ಚಾಲಕರ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಮಹಿಳೆಯರು ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಡ ಮಹಿಳೆಯರ ಬದುಕಿಗೊಂದು ದಾರಿ ಮಾಡಿಕೊಡುವ ಉದ್ದೇಶದಿಂದ ಬಡ ಮಹಿಳೆಯರಿಗೆ ಕಾರು ಹಾಗೂ ದ್ವಿಚಕ್ರವಾಹನ ಚಲಾಯಿಸಲು ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.
ಸಾಲಸೌಲಭ್ಯದ ಮಾಹಿತಿ : ತರಬೇತಿ ಮುಗಿದ ಬಳಿಕ ಮಹಿಳೆಯರಿಗೆ ಉದ್ಯೋಗ ಕೊಡಿಸಲಾಗುವುದು. ಜತೆಗೆ ವಾರ್ಷಿಕ ಆದಾಯದ ಆಧಾರದ ಮೇಲೆ ವಾಹನ ಖರೀದಿಗೆ ಕೆಲ ಬ್ಯಾಂಕ್​ಗಳ ಮೂಲಕ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಟ್ರಸ್ಟ್​ನಿಂದ ಬ್ಯಾಂಕ್​ ಸಾಲ ಸೌಲಭ್ಯ ಪಡೆಯುವ ಕುರಿತು ಮಾಹಿತಿ ನೀಡಲಾಗುವುದು ಎಂದು ವಿ.ರಾಮಸ್ವಾಮಿ ತಿಳಿಸಿದರು.
60ಕ್ಕೂ ಹೆಚ್ಚು ಮಂದಿ ನೋಂದಣಿ : ತರಬೇತಿಗೆ 60ಕ್ಕೂ ಹೆಚ್ಚು ಮಂದಿ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ತಾಲೂಕಿನಾದ್ಯಂತ ಯಾವುದೇ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಬಹುದು, ದಿನಕ್ಕೆ 2 ಗಂಟೆಯಂತೆ 15 ದಿನಗಳ ಕಾಲ ತರಬೇತಿ ನೀಡಲಾಗುವುದು. ಭಾಗವಹಿಸುವವರು ಮಹಿಳೆಯರು ಆಧಾರ್​ ಕಾರ್ಡ್​, ವೋಟರ್​ ಐಡಿ, ಪ್ಯಾನ್​ಕಾರ್ಡ್​, ಎರಡು ಭಾವಚಿತ್ರದೊಂದಿಗೆ ಬಂದು ನೋಂದಾಯಿಸಿಕೊಳ್ಳಬಹುದು.