ಮಾಲ್ದಾರೆ ವ್ಯಾಪ್ತಿಯ ದುಬಾರೆ ಮೀಸಲು ಅರಣ್ಯದಲ್ಲಿ ಕಳ್ಳಬೇಟೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. 
ರಾಜ್ಯ

ಮೂವರು ಬೇಟೆಗಾರರ ಸೆರೆ

ವಸಂತಕುಮಾರ್ ಬಿ

ಸಿದ್ದಾಪುರ:

ಮಾಲ್ದಾರೆ ಸಮೀಪದ ದುಬಾರೆ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ನಗ್ಗಿದ್ದಲ್ಲದೆ ಕಳ್ಳಬೇಟೆಗೆ ಸಿದ್ಧತೆ ನಡೆಸಿದ್ದ ಆರೋಪದಡಿ ಅರಣ್ಯ ಇಲಾಖೆ ಸಿಬ್ಬಂದಿ ಮೂವರನ್ನು ಬಂಧಿಸಿದ್ದು, ಬಂದೂಕು ಹಿಡಿದಿದ್ದ ಮತ್ತಿಬ್ಬರು ಕಾಡಿನೊಳಗೆ ತಪ್ಪಿಸಿಕೊಂಡಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಕೇರಳಂನ ತ್ರಿಶೂರ್ ಜಿಲ್ಲೆಯ ತೋಮಸ್, ಸುರೇಶ್ ಹಾಗೂ ಕೊಂಡಗೇರಿ ಗ್ರಾಮದ ಮೊಹಮ್ಮದ್ ಹನೀಫ್ ಬಂಧಿತರು.


ಮಾಲ್ದಾರೆ ಗಸ್ತಿನ ದೊಡ್ಡಹಡ್ಡು ಭಾಗದಲ್ಲಿ ಕಳ್ಳಬೇಟೆ ಸಿದ್ಧತೆಯ ಖಚಿತ ಸುಳಿವು ಆಧರಿಸಿ ಮಾಲ್ದಾರೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ಈ ವೇಳೆ ಅರಣ್ಯದೊಳಗೆ ಅಪರಿಚಿತ ಕಾರು ನಿಂತಿರುವುದನ್ನು ಕಂಡು ಶೋಧ ಮುಂದುವರಿಸಿದಾಗ ಘಟನೆ ಬೆಳಕಿಗೆ ಬಂದಿದೆ.


ತಪ್ಪಿಸಿಕೊಳ್ಳಲು ಆರೋಪಿಗಳು ಯತ್ನಿಸಿದಾಗ ಮೂವರನ್ನು ಬೆನ್ನಟ್ಟಿ ಹೀಡಿದಿದ್ದಾರೆ. ತಪ್ಪಿಸಿಕೊಂಡ ಇಬ್ಬರಿಗೆ ಶೋಧ ಮುಂದುವರಿಸಿದ್ದಾರೆ.

ಆರೋಪಿಗಳ ಬಳಿಯಿದ್ದ ಬಟ್ಟೆ, ಅಡುಗೆ ಸಾಮಗ್ರಿ, ಆಯುಧಗಳು, ಸಿಡಿಮದ್ದು, ಜಿಲೆಟಿನ್ ಕಡ್ಡಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.


ವ್ಯಕ್ತಿಯೊಬ್ಬರು ನಿಂತಿರುವ ಫೋಟೋ ಸೇರಿದಂತೆ ಮೀಸಲು ಅರಣ್ಯದೊಳಗೆ ತೆಗೆದಿರುವ ಹಲವು ಫೋಟೊಗಳು ಆರೋಪಿಗಳ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ವಾಟ್ಸ್ ಆ್ಯಪ್‌ನಲ್ಲಿ ಆನೆದಂತಕ್ಕೆ ಸಂಬಂಧಿಸಿದ ವಿಡಿಯೋವೊಂದು ಪತ್ತೆಯಾಗಿದ್ದು, ಅದನ್ನು ಕೇರಳದ ವ್ಯಕ್ತಿಯೊಬ್ಬರಿಗೆ ಕಳುಹಿಸಿರುವುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದು ಬಂದಿದೆ. ಕೃತ್ಯಕ್ಕೆ ಬಳಸಿದ ಕಾರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದೆ.

ಜಿಲೆಟಿನ್ ಕಡ್ಡಿ, ಗಾಂಜಾ ಪತ್ತೆ:

ಆರೋಪಿಗಳಿಂದ ಜಿಲೆಟಿನ್ ಕಡ್ಡಿ ಹಾಗೂ ಗಾಂಜಾ ಸೊಪ್ಪು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿದ್ದಾಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಅಲ್ಲದೆ ಸ್ಫೋಟಕಗಳು ಪತ್ತೆಯಾಗಿರುವ ಕಾರಣ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.


ಪ್ರಕರಣದ ಮುಂದಿನ ತನಿಖೆಯನ್ನು ಮಡಿಕೇರಿ ಡಿಎಫ್‌ಒ ಅಭಿಷೇಕ್ ಹಾಗೂ ಎಸಿಎಫ್ ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಮುಂದುವರಿಸಲಿದ್ದಾರೆ. ಕಾರ್ಯಾಚರಣೆಯಲ್ಲಿ ಮಾಲ್ದಾರೆ ಗಸ್ತಿನ ಡಿಆರ್‌ಎಫ್‌ಒ ಹಂಸ, ಬೀಟ್ ಫಾರೆಸ್ಟರ್ ಚಂದ್ರಶೇಖರ್, ಅಜಯ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.