ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ 
ರಾಜ್ಯ

ವ್ಯವಹಾರ, ವ್ಯಾಪರ ಮಾಡುವ ಶಕ್ತಿ ಇದೆ: ಅದಕ್ಕೆ ಅಧಿಕೃತವಾಗಿ ಆಸ್ತಿ ಘೋಷಿಸಿದ್ದೇನೆ; ಗೊಡ್ಡು ಬೆದರಿಕೆಗೆ ಹೆದರಲ್ಲ: ಹೆಚ್​ಡಿಕೆ ಆರೋಪಕ್ಕೆ ಸಿಎಂ ಡಿಕೆಶಿ ತಿರುಗೇಟು | CM DKS

ನೈಸ್ ರಸ್ತೆ ಯೋಜನೆ ಮತ್ತು ಅಕ್ರಮ ಆಸ್ತಿ ಗಳಿಕೆ ಬಗ್ಗೆ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ.ಶಿವಕುಮಾರ್, ನನಗೆ ವ್ಯವಹಾರ, ವ್ಯಾಪರ ಮಾಡುವ ಶಕ್ತಿ ಇದೆ. ಅದಕ್ಕೆ ಅಧಿಕೃತವಾಗಿ ಆಸ್ತಿ ಘೋಷಿಸಿದ್ದೇನೆ, ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ.

ನವದೆಹಲಿ: ನೈಸ್ ರಸ್ತೆ ಯೋಜನೆ ಮತ್ತು ಅಕ್ರಮ ಆಸ್ತಿ ಗಳಿಕೆ ಬಗ್ಗೆ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ.ಶಿವಕುಮಾರ್, ನನಗೆ ವ್ಯವಹಾರ, ವ್ಯಾಪರ ಮಾಡುವ ಶಕ್ತಿ ಇದೆ. ಅದಕ್ಕೆ ಅಧಿಕೃತವಾಗಿ ಆಸ್ತಿ ಘೋಷಿಸಿದ್ದೇನೆ, ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೆಚ್‌.ಡಿ.ಕುಮಾರಸ್ವಾಮಿ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಇಷ್ಟು ದಿನ ಯಾಕೆ ಸುಮ್ಮನೆ ಇದ್ದರು. ಅವರ ತಂದೆಯೇ ಯೋಜನೆಗೆ ಸಹಿ ಹಾಕಿದ್ದಾರೆ, ಅವರು ಮುಖ್ಯಮಂತ್ರಿಯಾಗಿದ್ದರು. ಈ ನಡುವೆ ಬೇಕಾದಷ್ಟು ಬೇನಾಮಿ ಹಗರಣ ನಡೆದಿದೆ. ಪಾಪಾ ಬಹಳ ಡೆಸ್ಪರೇಟ್‌ ಆಗಿದ್ದಾರೆ. ಬಿಜೆಪಿಯಿಂದ ಅವರಿಗೆ ಒತ್ತಡ ಇದೆ ಎಂದು ಹೇಳಿದ್ದಾರೆ.

ಆಸ್ತಿ ಮಾಡಿ ಅಧಿಕೃತವಾಗಿ ಘೋಷಿಸಿದ್ದೇನೆ

ಆಸ್ತಿ ಗಳಿಕೆ ಆರೋಪಕ್ಕೆ ಕೌಂಟರ್ ನೀಡಿರುವ ಸಿಎಂ, ನನ್ನದು ಆಸ್ತಿ ಇದೆ. ಯಾಕೆ ಇರಬಾರಾದಾ? ನನ್ನ ಮಕ್ಕಳು ಆಸ್ತಿ ತಗೋಬಾರಾದಾ? ಕಾನೂನು ವ್ಯಾಪ್ತಿಯಲ್ಲಿ ಖರೀದಿ ಮಾಡಿದ್ದಾರೆ. ನೈಸ್ ಯೋಜನೆಯ ಅರ್ಥಾರಟಿಯಲ್ಲಿ ಅವರದ್ದು ಆಸ್ತಿ ಇಲ್ವಾ?, ಊರು ಬಿಟ್ಟು ಬಂದು ಇಲ್ಲಿ ಆಸ್ತಿ ಮಾಡಿಲ್ವಾ? ನನ್ನ ಮಕ್ಕಳಿಗೆ ಶಕ್ತಿಯಿದ್ರೆ ಇನ್ನು ಖರೀದಿ ಮಾಡ್ತಾರೆ. ನಾವು ಎಷ್ಟಾದ್ರೂ ಖರೀದಿ ಮಾಡ್ತಿವಿ, ಅವರೇನು ಐಟಿ ಅಧಿಕಾರಿಗಳಾ? ಲಂಚ ತೆಗೆದುಕೊಂಡಿದ್ದೇನಾ? ನನಗೆ ವ್ಯವಹಾರ, ವ್ಯಾಪರ ಮಾಡುವ ಶಕ್ತಿ ಇದೆ. ಆಸ್ತಿ ಮಾಡಿ ಅಧಿಕೃತವಾಗಿ ಘೋಷಿಸಿದ್ದೇನೆ ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ

ಈಗಾಗಲೇ ಅವರು ಎಲ್ಲ ಸಂಸ್ಥೆಗಳಿಗೆ ದಾಖಲೆ ನೀಡಿದ್ದಾರೆ, ಇನ್ನಷ್ಟು ದಾಖಲೆ ಕೊಡಲಿ. ಎಕೆ, ಡಿಕೆ ಏನಾದ್ರೂ ಮಾಡಲಿ, ಸುಳ್ಳೆ ಅವರ ಮನೆ ದೇವರು. ಎಷ್ಟಾದ್ರೂ ಸಿನಿಮಾ ನಿರ್ದೇಶಕ, ನಿರ್ಮಾಪಕ, ನಟರಲ್ವಾ? ಅವರು ಹೇಳಿದ್ದು ಎಲ್ಲವೂ ಸುಳ್ಳಿನ ಕಂತೆ. ನೈಸ್ ಜೊತೆಗೆ ವ್ಯವಹಾರ ಹಾಳಾಯ್ತು ಅಂತ ಈಗ ಆರೋಪ ಮಾಡ್ತಿದ್ದಾರೆ. ಅವರ ಅಣ್ಣ-ತಮ್ಮನ ಆಸ್ತಿ ಎಷ್ಟಿದೆ ಅಲ್ಲಿ ಅಂತ ನಮಗೆ ಗೊತ್ತಿಲ್ವ? ವಿಧಾನಸೌಧ ಮುಂದೆ ಅಲ್ಲ, ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

ಗೊಡ್ಡು ಬೆದರಿಕೆ ಹೆದರಲ್ಲ

ಕೇಂದ್ರದಲ್ಲಿ ಈಗಲೂ ಬಿಜೆಪಿ ಸರ್ಕಾರ ಇದೆ. ಅದೇನು ಮಾಡುತ್ತಾರೋ ಮಾಡಲಿ. ಇಂತಹ ಬ್ಲ್ಯಾಕ್​ಮೇಲ್​ಗೆ ನಾನು ಬಗ್ಗಲ್ಲ, ಗೊಡ್ಡು ಬೆದರಿಕೆಗೆ ಈ ಡಿ.ಕೆ.ಶಿವಕುಮಾರ್ ಹೆದರುವುದಿಲ್ಲ. ನಮ್ಮ ಸರ್ಕಾರದ ಜನಪ್ರಿಯತೆ ತಡೆಯಲು ಸಾಧ್ಯವಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ, ಪಾರ್ಟ್ 2ನಲ್ಲಿ ಏನಿದೆ ಎಲ್ಲಾ ಗೊತ್ತಿದೆ. ಸ್ವಾಮೀಜಿ ಫೋನ್ ಟ್ರ್ಯಾಪ್ ಮಾಡಿಸಿದವರು, ಯಾರನ್ನು ಬಿಟ್ಟಿದ್ದಾರೆ? ನನ್ನನ್ನು ಬಿಡ್ತಾರಾ? ಕುಮಾರಸ್ವಾಮಿ ಅವರ ತಂದೆಯನ್ನೇ ಬಿಡಲ್ಲ, ನನ್ನಿಂದ ನಮ್ಮಪ್ಪ ಅಂತಾರೇ. ಅವರಿಗೆ ಸಂಸ್ಕಾರ ಸಂಸ್ಕೃತಿ ಇಲ್ಲ. ಬ್ಲಾಕ್ ಮೇಲ್ ಮಾಡಿದರೆ ನಾನು ಹೆದರುತ್ತೇನೆ ಅಂದುಕೊಂಡಿದ್ದಾರೆ. ಹೆದರುವ ಜಾಯಮಾನ ನಂದಲ್ಲ ಎಂದು ಕಿಡಿಕಾರಿದ್ದಾರೆ.