Munnekolala viral road photo 
ರಾಜ್ಯ

Bengaluru ಮುನ್ನೇಕೊಳಾಲ ಪ್ರದೇಶದ ದುಸ್ಥಿತಿ ಅನಾವರಣಗೊಳಿಸಿದ ಟೆಕ್ಕಿ; 'ಇದು ನನ್ನ ನಗರ' ಎಂದು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಮುನ್ನೇಕೊಳಾಲದ ರಸ್ತೆ ಅವ್ಯವಸ್ಥೆ ಬಗ್ಗೆ ಮಾಹಿತಿ ತೆರೆದಿಟ್ಟ ಟೆಕ್ಕಿ
  • ಟ್ಯಾಕ್ಸ್ ಪಾವತಿದಾರರು ಇಂತಹ ಕೊಳಚೆ ತುಂಬಿದ ಪ್ರದೇಶದಲ್ಲಿ ವಾಸ ಮಾಡಬೇಕಾ ಎಂದು ಪೋಸ್ಟ್
  • ದುರಸ್ತಿಗೆ ಒತ್ತಾಯಿಸಿ ಹೋರಾಟಕ್ಕೆ ಕರೆ ಕೊಟ್ಟ ರೆಡ್ಡಿಟ್​ ಬಳಕೆದಾರ
ಬೆಂಗಳೂರು: ನಗರ ತನ್ನ ರಸ್ತೆ, ಕಸ, ಗುಂಡಿಗೆ ಸದಾ ಟೀಕೆಗೆ ಗುರಿಯಾಗುತ್ತಲೇ ಇರುತ್ತದೆ. ಸದ್ಯ ಮಹದೇವಪುರ ವಿಧಾನಸಭಾ ಕ್ಷೇತ್ರದ ಪ್ರದೇಶವಾದ ಮುನ್ನೇಕೊಳಾಲದ (Munnekolala)ಸ್ಥಳೀಯ ನಿವಾಸಿಯೊಬ್ಬರು ಇಲ್ಲಿನ ಅವ್ಯವಸ್ಥೆ, ಅಲ್ಲೇ ನಿಂತ ಕೊಳಚೆ ನೀರು, ಕಸ ಸೇರಿದಂತೆ ಸಾಕಷ್ಟು ಸಮಸ್ಯೆಯನ್ನು ರೆಡ್ಡಿಟ್​ನಲ್ಲಿ ತೆರೆದಿಟ್ಟಿದ್ದಾರೆ.
'ಫಾರ್ಚೂನ್ 500 ಸೇರಿದಂತೆ ಐಟಿ-ಬಿಟಿ ಕಂಪನಿಗಳಿರೋ ಟೆಕ್ ಪಾರ್ಕ್‌ಗಳ ಪಕ್ಕದಲ್ಲೇ ಮುನ್ನೇಕೊಳಾಲ ಪ್ರದೇಶವಿದೆ. ಇಲ್ಲಿನ ರಸ್ತೆಗಳ ಸ್ಥಿತಿ-ಗತಿ ಹೇಗಿದೆ ನೋಡಿ. ಇಲ್ಲಿ ವಾಸಿಸುವ ಜನರು ತೆರಿಗೆ ಪಾವತಿ ಮಾಡುವವರು. ಆದರೂ ಇಂತಹ  ಕೆಟ್ಟ ಪ್ರದೇಶದಲ್ಲಿ ಇರುವುದು ಅನಿವಾರ್ಯವಾಗಿದೆ' ಎಂದು ಬೆಂಗಳೂರು ಎನ್ನುವ ಖಾತೆಯಿಂದ ರೆಡ್ಡಿಟ್​ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಪೋಸ್ಟ್​ನಲ್ಲಿ ಏನಿದೆ?

'ತೆರಿಗೆ ಪಾವತಿ ಮಾಡಿದರು ಸಹ, ಒಳಚರಂಡಿ ನೀರು ತುಂಬಿ ಹರಿಯುತ್ತಿರುವುದು, ತಾರ್​ ಇಲ್ಲದ ರಸ್ತೆ ಅಲ್ಲಲ್ಲಿ ಬಿದ್ದ ಕಸದ ಮಧ್ಯೆ ಇಲ್ಲಿನ ಜನರು ವಾಸ ಮಾಡುವ ಸ್ಥಿತಿ ಇದೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಒಟ್ಟಾಗಿ ದನಿಗೂಡಿಸಿ, ಕಳಪೆ ಮೂಲ ಸೌಕರ್ಯದ ವಿರುದ್ಧ ಹೋರಾಡಬೇಕು' ಎಂದು ಕರೆ ನೀಡಿದ್ದಾರೆ.
'ಜಯನಗರ, ಬಸವನಗುಡಿ, ಮಲ್ಲೇಶ್ವರಂ ಸೇರಿದಂತೆ ಸ್ವರ್ಗದಂತಹ ಪ್ರದೇಶದಲ್ಲಿ ವಾಸ ಮಾಡುವ ಬೆಂಗಳೂರಿಗರೇ ಇಲ್ಲೊಮ್ಮೆ ನೋಡಿ. ಇದೇ ಸಿಲಿಕಾನ್​ ಸಿಟಿಯ ಮತ್ತೊಂದು ಭಾಗದ ಅಧ್ಯಾಯ. ನೀವು ಕನಿಷ್ಠ ಗಮನಹರಿಸದ ಈ ನಗರದ ರಸ್ತೆ ಹೇಗಿದೆ?. ಇಲ್ಲಿನ ವ್ಯವಸ್ಥೆ ಬಗ್ಗೆ ಒಮ್ಮೆ ಕಣ್ಣಾಡಿಸಿ' ಎಂದು ಬರೆದುಕೊಂಡಿದ್ದಾರೆ.

ಈ ವಿರುದ್ಧ ಹೋರಾಡ್ಬೇಕು

'ನಾನು ಬೆಂಗಳೂರಿಗೆ ಹಳೆಯ ನಿವಾಸಿ. ಆದರೆ, ಈ ಸ್ಥಳಕ್ಕೆ ಕಾಲಿಟ್ಟು ಇದು ನನ್ನ ನಗರ ಎಂದು ಹೇಳಲು ಸಾಧ್ಯವಾಗುತ್ತಿಲ್ಲ  ನಾವು ನಮ್ಮ ಪೂರ್ವಜರು ಕಟ್ಟಿದ ಪ್ರದೇಶದಲ್ಲಿ ಬದುಕುತ್ತಿದ್ದೇವೆ, ಈ ನಗರವನ್ನು ಕಾಪಾಡುವುದು ಇಲ್ಲಿನ ರಾಜಾಕಾರಣಿಗಳ ಕರ್ತವ್ಯ. ಇಲ್ಲಿ ವಾಸಿಸಲು ಮನೆ ಬೇಕೆಂದರೆ ಅದರ ಬಾಡಿಗೆ ಬಲು ದುಬಾರಿ. ಕೆಲವರು ತಮ್ಮ ಶೇ.40ರಿಂದ 50ರಷ್ಟು ಹಣವನ್ನು ಬಾಡಿಗೆಗೆ ಸುರಿಯುತ್ತಿದ್ದಾರೆ. ಆದರೆ, ರಸ್ತೆ ಸ್ಥಿತಿ ಮಾತ್ರ ದುಸ್ಥಿತಿ. ನಾವೀಗ ಒಟ್ಟಾಗಿ ಇದರ ವಿರುದ್ಧ ಹೋರಾಡುವ ಸಮಯ ಬಂದಿದೆ' ಎಂದರು. 

 ನೆಟ್ಟಿಗರು ಏನಂದ್ರು?

'ಇಲ್ಲಿ ಅಕ್ರಮವಾಗಿ ಪಿಜಿ ಕಟ್ಟಿರುವ ನಿವಾಸಿಗಳು ಇದ್ದಾರೆ. ಹೀಗಾಗಿ ಇಲ್ಲಿನ ಸ್ಥಿತಿ ಹೀಗಾಗಿದೆ. ನನಗೆ ಈ ಪ್ರದೇಶದ ಬಗ್ಗೆ ಯಾವುದೇ ಕನಿಕರ ಇಲ್ಲ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  'ನೀವು ಟ್ಯಾಕ್ಸ್​ ಕಟ್ಟುವವರು ಆಗಿರಬಹುದು. ಆದರೆ ನಿಮಗೆ ಅಲ್ಲಿ ವೋಟ್ ಹಾಕುವ ಯೋಗ್ಯತೆ ಇಲ್ಲದಿದ್ದರೆ ಅಥವಾ ಆ ಪ್ರದೇಶದಲ್ಲಿರುವ ಬಹುತೇಕ ಜನರು ಬೆಂಗಳೂರಿನ ಮತದಾರರು ಅಲ್ಲದಿದ್ದರೆ ಆ ಪ್ರದೇಶದ ಸ್ಥಿತಿ ಹೀಗೆ ಇರುತ್ತದೆ' ಎಂದು ಬೇಸರ ವ್ಯಕ್ತಪಡಿಸಿದರು. 
ಲಾಸ್ಟ್​ ಕಾರ್ಟೂನಿಸ್ಟ್​ ಎನ್ನುವವರು ಟ್ವೀಟ್ ಮಾಡಿದ್ದು ಬೆಂಗಳೂರು ಹೊರವರ್ತುಲ ಪ್ರದೇಶವೇ ಒಂದು ಅಕ್ರಮ.  ಐಟಿ ಕಂಪನಿಗಳು ಹೆಚ್ಚಾದ ಹಿನ್ನೆಲೆ ಇಂತಹ ಪ್ರದೇಶವನ್ನು ಅನುಮೋದಿಸಬೇಕಾಯಿತು. ಈ ಪ್ರದೇಶವು ಇನ್ನು 10 ವರ್ಷದಲ್ಲಿ ನೆಲಸಮ ಮಾಡಬಹುದು. ಈ ಪ್ರದೇಶವನ್ನು ಉಳಿಸಿಕೊಳ್ಳುವಷ್ಟು ಯೋಗ್ಯವಾದದ್ದಲ್ಲ ಎಂದು ಹೇಳಲಾಗಿದೆ, (ಏಜೆನ್ಸೀಸ್).