- 1938 ಎಕರೆ ಜಮೀನು ವಶಕ್ಕೆ ಕೆಎಚ್ಬಿ ಹೊರಡಿಸಿದ್ದ ಅಧಿಸೂಚನೆ ವಜಾ
- ಬನ್ನೇರುಘಟ್ಟದ ಇಎಸ್ಝಡ್ ವ್ಯಾಪ್ತಿಗೆ ಧಕ್ಕೆ ಎಂದ ಹೈಕೋರ್ಟ್
ಬೆಂಗಳೂರು: ಸೂರ್ಯನಗರ 4ನೇ ಹಂತದ ವಸತಿ ಲೇಔಟ್ ನಿರ್ಮಾಣಕ್ಕಾಗಿ ಆನೇಕಲ್ ತಾಲೂಕಿನ ಕೋನಸಂದ್ರ, ಬೊಮ್ಮಂಡಹಳ್ಳಿ, ಕಾಡುಜಕ್ಕನಹಳ್ಳಿ, ಇಂಡಲವಾಡಿ ಮತ್ತು ಬಗ್ಗನದೊಡ್ಡಿ ಗ್ರಾಮಗಳಲ್ಲಿ ಒಟ್ಟು 1938 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಕರ್ನಾಟಕ ಗೃಹ ಮಂಡಳಿಯು (ಕೆಎಚ್ಬಿ) 2015ರ ಮಾರ್ಚ್ನಲ್ಲಿ ಹೊರಡಿಸಿದ್ದ ಅಂತಿಮ ಅಧಿಸೂಚನೆಯನ್ನು ಹೈಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿದೆ.
ಈ ಯೋಜನೆಯಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ, ವಲಯಕ್ಕೆ (ಇಎಸ್ಝಡ್) ತೀವ್ರ ಹಾನಿಯಾಗಲಿದೆ. ಆನೆಗಳ ಕಾರಿಡಾರ್ ಹಾಗೂ ಜೀವವೈವಿಧ್ಯಕ್ಕೆ ಧಕ್ಕೆಯಾಗುವಂತಹ ಯೋಜನೆಗಳಿಗಿಂತ ಪರಿಸರ ಹಿತಾಸಕ್ತಿಯೇ ಮುಖ್ಯ ಎಂದು ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಚ್. ಶಾಂತಿಭೂಷನ್ ಅವರಿದ್ದ ವಿಭಾಗೀಯ ನ್ಯಾಯಪೀಠ ತೀರ್ಪು ನೀಡಿದೆ.
ಭೂಸ್ವಾಧೀನ ಪ್ರಕ್ರಿಯೆಗಳನ್ನು ಭಾಗಶಃ ಮಾನ್ಯ ಮಾಡಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಭೂಮಾಲೀಕರು ಮತ್ತು ಕೆಎಚ್ಬಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ. ಏಕಸದಸ್ಯ ನ್ಯಾಯಪೀಠವು ಕೃಷಿ ಜಮೀನುಗಳ ಸ್ವಾಧಿನವನ್ನು ಎತ್ತಿಹಿಡಿದು, ಪರಿವರ್ತಿತ ಜಮೀನುಗಳ ಸ್ವಾಧೀನವನ್ನು ಮಾತ್ರ ರದ್ದುಪಡಿಸಿತ್ತು. ಈಗ ವಿಭಾಗೀಯ ಪೀಠವು ಸಂಪೂರ್ಣ ಭೂಸ್ವಾಧೀನ ಅಧಿಸೂಚನೆಯನ್ನು ರದ್ದುಪಡಿಸಿರುವುದರಿಂದ, ಏಕಸದಸ್ಯ ಪೀಠದ ಆದೇಶ ರದ್ದಾಗಿದೆ.
ವೈಜ್ಞಾನಿಕ ಅಧ್ಯಯನ ಮಾಡಿಲ್ಲ:
ಒಟ್ಟಾರೆ ಭೂಸ್ವಾಧಿನ ಪ್ರಕ್ರಿಯೆಯು ಕೇವಲ ವಸತಿ ನಿರ್ಮಾಣ ದೃಷ್ಟಿಕೋನದಿಂದ ಕೂಡಿದ್ದು, ಯಾವುದೇ ವೈಜ್ಞಾನಿಕ ಪರಿಸರ ಪರಿಣಾಮಗಳ ಅಧ್ಯಯನ ಮಾಡಿಲ್ಲ. ವಸತಿ ಮತ್ತು ಅಭಿವೃದ್ಧಿ ಕಾರ್ಯಗಳು ಮಾನವನಿಗೆ ಎಷ್ಟು ಮುಖ್ಯವೋ, ಪರಿಸರ, ಅರಣ್ಯ, ನೀರು ಮತ್ತು ವನ್ಯಜಿವಿಗಳ ಸಂರಕ್ಷಣೆಯೂ ಅಷ್ಟೇ ಮಹತ್ವ ಹೊಂದಿದೆ. ಯಾವುದೇ ಸಾರ್ವಜನಿಕ ಉದ್ದೇಶವು ಪರಿಸರ ಸುವ್ಯವಸ್ಥೆಯ ಹಿತಾಸಕ್ತಿಗಳನ್ನು ಮೀರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅವಲೋಕನ ಮಾಡಿದೆ.
- ಯೋಜನೆಯು ಆನೆ ಕಾರಿಡಾರ್ಗೆ ಗಂಭೀರ ಅಡಚಣೆ ಉಂಟುಮಾಡಲಿದೆ. ಇದು ಮಾನವ-ವನ್ಯಜಿವಿ ಸಂರ್ಷವನ್ನು ತೀವ್ರಗೊಳಿಸಲಿದೆ ಎಂದು ರಾಜ್ಯ ಅರಣ್ಯ ಇಲಾಖೆ ಮತ್ತು ಸೆಂಟ್ರಲ್ ಎಂಪವರ್ಡ್ ಕಮಿಟಿ ಎಚ್ಚರಿಕೆ ನೀಡಿದೆ.
- ಭೂಸ್ವಾಧೀನಕ್ಕೂ ಮುನ್ನ ಕೇಂದ್ರ ಸರ್ಕಾರದ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಮತ್ತು ರಾಷ್ಟ್ರೀಯ ವನ್ಯಜಿವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ಕಡ್ಡಾಯವಾದ ಅನುಮೋದನೆಗಳನ್ನು ಪಡೆದಿಲ್ಲ.
- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಇಎಸ್ಝಡ್ ವ್ಯಾಪ್ತಿಯಲ್ಲಿ ವಸತಿ ಯೋಜನೆ ಬರುವುದು ಪರಿಸರ ಮತ್ತು ವನ್ಯಜಿವಿಗಳ ಮೇಲೆ ದುಷ್ಪರಿಣಾಮ ಬೀರಲಿದೆ.
- ಇಡೀ ಯೋಜನೆಯೇ ಪರಿಸರಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಇರುವಾಗ ಭೂಸ್ವಾಧೀನವನ್ನು ಭಾಗಶಃ ಎತ್ತಿಹಿಡಿದಿರುವ ಏಕಸದಸ್ಯ ಪೀಠದ ಆದೇಶ ತಪ್ಪು ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.