ಶಹಾಬಾದ್ ರಸ್ತೆಯ ನಂದೂರು&ಕೆಸರಟಗಿ ವಸಾಹತು ಪ್ರದೇಶದ 3ನೇ ಹಂತದಲ್ಲಿ ವಿವಿಧ ಘಟಕಗಳಿಗೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಬ್ದುಲ್ ಅಜೀಮ್, ನಾಗೇಶ, ಪರಮೇಶ, ಅನೀಲ, ಪ್ರಕಾಶ, ಬಿ.ವಿಠ್ಠಲರಾಜು, ರಾವೇಂದ್ರ ಹೊಸಮನಿ ಇತರರಿದ್ದರು.
- ಡಿಸಿ ಇಕ್ರಮ್ ಶರೀಫ್ ಸೂಚನೆ
- ನಂದೂರು ಕೈಗಾರಿಕೆ ಘಟಕಕ್ಕೆ ಭೇಟಿ, ಪರಿಶೀಲನೆ
ಕಲಬುರಗಿ: ಕೈಗಾರಿಕಾ ಪ್ರದೇಶದಲ್ಲಿ (ಮಹಿಳಾ ಪಾರ್ಕ್ ಒಳಗೊಂಡಂತೆ)ನಿವೇಶನ ಪಡೆದು ನಿಗದಿತ ಅವಧಿಯಲ್ಲಿ ಕೈಗಾರಿಕೆ ಸ್ಥಾಪಿಸದ ನಿವೇಶನಗಳನ್ನು ಸರ್ವೇ ಮಾಡಿ ರದ್ದುಗೊಳಿಸಿ ಅವುಗಳನ್ನು ಹೊಸ ಉದ್ದಿಮೆಗಳಿಗೆ ಹಂಚಿಕೆ ಮಾಡಲು ಪ್ರಕ್ರಿಯೆ ಆರಂಭಿಸಿ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೂಚನೆ ನೀಡಿದರು.
ಶಹಾಬಾದ್ ರಸ್ತೆಯ ನಂದೂರು-ಕೆಸರಟಗಿ ವಸಾಹತು ಪ್ರದೇಶದ 3ನೇ ಹಂತದ ವಿವಿಧ ಘಟಕಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಸುಮಾರು 50 ಎಕರೆ ಪ್ರದೇಶದಲ್ಲಿ ರಾಜ್ಯ ಸರ್ಕಾರದಿಂದ ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆ ಕಾರ್ಯ ನನೆಗುದ್ದಿಗೆ ಬಿದ್ದಿದ್ದು, ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಇದಕ್ಕಿರುವ ಅಡೆತಡೆ ನಿವಾರಿಸುವಂತೆ ತಾಕೀತು ಮಾಡಿದರು.
ಅಟೋಮೋಬೈಲ್ ಘಟಕಗಳನ್ನು ಒಂದೇ ಕಡೆ ಸ್ಥಾಪಿಸುವ ಉದ್ದೇಶಿತ ಕಪನೂರ ಆಟೋಮೋಬೈಲ್ ಕ್ಲಸ್ಟರ್ ಸ್ಥಾಪನೆ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಕೆಐಎಡಿಬಿಯಿಂದ 20 ಎಕರೆ ಪ್ರದೇಶ ಆಟೋ ಕ್ಲಸ್ಟರ್ಗೆ ಮೀಸಲಿರಿಸಿದ್ದು, ಎಂಎಸ್ಸಿಸಿಡಿಪಿ ಯೋಜನೆಯಡಿ ಅನುಮೋದನೆಗೆ ಸರ್ಕಾರದ ಹಂತದಲ್ಲಿ ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಕೆಐಎಡಿಬಿ ಕಾರ್ಯನಿರ್ವಾಹಕ ಅಭಿಯಂತ ನಾಗೇಶ, ಎಇಇ ಪರಮೇಶ, ಎಇ ಅನೀಲ ಮತ್ತು ಪ್ರಕಾಶ, ಜವಳಿ ಮತ್ತು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ.ವಿಠ್ಠಲರಾಜು, ಉಪನಿರ್ದೇಶಕ ರಾವೇಂದ್ರ ಹೊಸಮನಿ ಇದ್ದರು.