ಕೆ.ಆರ್.ನಗರ ಪಟ್ಟಣದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯಕ್ಕೆ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ಶಾಖೆ ವತಿಯಿಂದ ಶುದ್ಧೀಕರಣ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು. ವೀರೇಶ್, ಕೆ.ಎನ್.ಪ್ರಸನ್ ಕುಮಾರ್, ಆರ್.ಕೃಷ್ಣಪ್ಪ ಇತರರಿದ್ದರು.
ಕೆ.ಆರ್.ನಗರ: ಶಾಲಾ ಮಕ್ಕಳಿಗೆ ಶುದ್ಧವಾದ ನೀರು ಸಿಗಲಿ ಎಂಬ ಉದ್ದೇಶದಿಂದ ಕೆನರಾ ಬ್ಯಾಂಕ್ ವತಿಯಿಂದ ನೀರು ಶುದ್ಧೀಕರಣ ಯಂತ್ರವನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ವೀರೇಶ್ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯಕ್ಕೆ ಬುಧವಾರ ಪಟ್ಟಣದ ಕೆನರಾ ಬ್ಯಾಂಕ್ ಶಾಖೆ ವತಿಯಿಂದ ಕುಡಿಯುವ ನೀರಿನ ಶುದ್ಧೀಕರಣ ಯಂತ್ರವನ್ನು ವಿತರಿಸಿ ಮಾತನಾಡಿದರು.
ಠೇವಣಿ ಖಾತೆ, ಉಳಿತಾಯ ಹಾಗೂ ಸಾಲ ಸೌಲಭ್ಯ ಕಾರ್ಯಕ್ಷೇತ್ರಕ್ಕೆ ಸೀಮಿತಗೊಂಡಿದ್ದ ನಮ್ಮ ಬ್ಯಾಂಕ್ ಈಗ ತನ್ನ ಕಾರ್ಯ ವ್ಯಾಪ್ತಿಯನ್ನು ಸಾಮಾಜಿಕ ಸೇವೆಗೆ ವಿಸ್ತರಿಸಿಕೊಂಡಿದೆ. ಕೆನರಾ ವಿದ್ಯಾಜ್ಯೋತಿ ಹೆಸರಿನಲ್ಲಿ ಸರ್ಕಾರಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಶಾಲೆಗಳಿಗೆ ಶೌಚಗೃಹ, ಶುದ್ಧ ಕುಡಿಯುವ ನೀರಿನ ಫಿಲ್ಟರ್‌ಗಳು, ಪರಿಸರ ಸಂರಕ್ಷಣೆಗಾಗಿ ಸಸಿ ನೆಡುವ ಕಾರ್ಯಕ್ರಮಗಳಂತಹ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 3ನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ನಮ್ಮ ಬ್ಯಾಂಕ್ ಉನ್ನತ ವಿದ್ಯಾಭ್ಯಾಸಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಅಗತ್ಯ ಉಳ್ಳವರು ಇದರ ಅನುಕೂಲ ಪಡೆದುಕೊಳ್ಳಿ ಎಂದರು.
ಆಂಜನೇಯ ಬ್ಲಾಕ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಕಳೆದ ಸಾಲಿನಲ್ಲಿ ಶುದ್ಧೀಕರಣ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ತಿಳಿಸಿದರು.
ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ ಕುಮಾರ್, ಬಿಇಒ ಆರ್. ಕೃಷ್ಣಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಿ.ಸ್ವಾಮಿಗೌಡ, ಆದರ್ಶ ವಿದ್ಯಾಲಯ ಮುಖ್ಯ ಶಿಕ್ಷಕಿ ರುಕ್ಕಿಣಿ, ಶಾಲೆಯ ಶಿಕ್ಷಕರಾದ ರಶ್ಮಿ, ಪ್ರಭು, ಲೋಕೇಶ್, ಜ್ಞಾನ ಶಂಕರ್, ನವ್ಯಾ, ಅನಿತಾ, ಶಶಿಕಲಾ, ಕವಿತಾ, ಸೋನು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.