ಗುಳೇದಗುಡ್ಡ ತಾಲೂಕಿನ ಪರ್ವತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಗಸ್ತ್ಯ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಬೇಸಿಗೆ ವಿಜ್ಞಾನ ಶಿಬಿರಕ್ಕೆ ಎಂ.ಬಿ. ದೊಡ್ಡಪ್ಪನವರ ಭೇಟಿ ನೀಡಿದರು. ಎಚ್. ಕೆ. ಗುಡೂರ, ಸಂಗಮೇಶ ಯಲಿಗಾರ ಇತರರಿದ್ದರು. 
ರಾಜ್ಯ

ಶಿಬಿರಗಳಿಂದ ವೈಜ್ಞಾನಿಕ ಮನೋಭಾವ ವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ. ದೊಡ್ಡಪ್ಪನವರ ಅಭಿಮತ
  • ಬೇಸಿಗೆ ಶಿಬಿರಕ್ಕೆ ಭೇಟಿ
ಗುಳೇದಗುಡ್ಡ: ಬೇಸಿಗೆ ರಜೆಯಲ್ಲಿ ಮಕ್ಕಳು ಕೇವಲ ಆಟಕ್ಕೆ ಸೀಮಿತವಾಗದೆ, ಜ್ಞಾನವರ್ಧಕ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು. ಇದು ಅವರಲ್ಲಿ ತರ್ಕಬದ್ಧ ಆಲೋಚನೆ ಮತ್ತು ವೈಜ್ಞಾನಿಕ ಮನೋಭಾವನೆ ಬೆಳೆಸಲು ಉತ್ತಮ ಅವಕಾಶವಾಗಿದೆ ಎಂದು ಬಾದಾಮಿ ತಾಲೂಕಿನ ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ.ದೊಡ್ಡಪ್ಪನವರ ಹೇಳಿದರು.
ಸಮೀಪದ ಪರ್ವತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಗಲಕೋಟೆಯ ಅಗಸ್ತ್ಯ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಮಕ್ಕಳ ಜ್ಞಾನವನ್ನು ಹೆಚ್ಚಿಸುವ ಕಾರ್ಯಮಾಡಿದ್ದು ಶ್ಲಾಘನೀಯ ಎಂದರು.
ಅಗಸ್ತ್ಯ ವಿಜ್ಞಾನ ಕೇಂದ್ರದ ಸಂಪನ್ಮೂಲ ವ್ಯಕ್ತಿ ರವಿಕಿರಣ ಹಡಪದ ಮಾತನಾಡಿ, ವಿದ್ಯಾರ್ಥಿಗಳಿಗೆ ಸರಳ ವಿಜ್ಞಾನ ಪ್ರಯೋಗ ಗಳನ್ನು ಪ್ರಾಯೋಗಿಕವಾಗಿ ವಿವರಿಸಿದರು. ಶಾಲಾ ಕೊಠಡಿಯ ಲಕದ ಮೇಲೆ ಬರೆದಿದ್ದ ಸಂವಿಧಾನಾತ್ಮಕ ಹುದ್ದೆಗಳಾದ ಶಾಸಕರು, ಸಂಸದರು, ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳ ಕಾರ್ಯ ವೈಖರಿಯ ಬಗ್ಗೆಯೂ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಮಾಹಿತಿ ನೀಡಿದರು.
ಮುಖ್ಯೋಪಾಧ್ಯಾಯ ಎಚ್.ಕೆ. ಗುಡೂರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಸಂಗಮೇಶ ಯಲಿಗಾರ, ಜಗದೀಶ ಬುಳ್ಳಾ ಇದ್ದರು.