ಜೈಲು ಬ್ಯಾರಕ್ನಲ್ಲೂ ಕ್ಯಾಮರಾ: ಅಕ್ರಮ, ಭದ್ರತಾ ಲೋಪಗಳ ತಡೆಗೆ ಹೈಪವರ್ ಕಮಿಟಿ ಶಿಫಾರಸು
ರಾಜ್ಯದ ಜೈಲುಗಳಲ್ಲಿ ಮುಂದುವರಿದಿರುವ ಅಕ್ರಮ ಚಟುವಟಿಕೆಗಳು, ಪ್ರಭಾವಿ ಕೈದಿಗಳಿಗೆ ಸಿಗುತ್ತಿರುವ ವಿಶೇಷ ಸೌಲಭ್ಯಗಳು ಹಾಗೂ ಭದ್ರತಾ ಲೋಪಗಳನ್ನು ತಡೆಗಟ್ಟುವ ಉದ್ದೇಶದಿಂದ ರಚಿಸಲಾದ ಉನ್ನತ ಅಧಿಕಾರ ಸಮಿತಿಯು 53 ಶಿಫಾರಸು ಒಳಗೊಂಡ ಸಮಗ್ರ ವರದಿಯನ್ನು ಗೃಹ ಇಲಾಖೆಗೆ ಸಲ್ಲಿಸಿದೆ. ಕೈದಿಗಳಿರುವ ಬ್ಯಾರಕ್ನಲ್ಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿದರೆ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಪ್ರಮುಖವಾಗಿ ಶಿಫಾರಸು ಮಾಡಲಾಗಿದೆ.
ಪ್ರಸ್ತುತ ಅನೇಕ ಜೈಲುಗಳಲ್ಲಿ ಕಾರಿಡಾರ್ಗಳು ಮತ್ತು ಪ್ರವೇಶ ದ್ವಾರಗಳಲ್ಲಿ ಮಾತ್ರ ಕ್ಯಾಮರಾಗಳಿದ್ದು, ಬ್ಯಾರಕ್ ಒಳಗೆ ನಿಗಾ ವ್ಯವಸ್ಥೆ ಕೊರತೆಯಿರುವ ಕಾರಣ ಮೊಬೈಲ್ ಬಳಕೆ, ಮಾದಕ ವಸ್ತುಗಳ ಸಾಗಾಟ, ಬೆದರಿಕೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಸಿಗುತ್ತಿದೆ. ಹೀಗಾಗಿ ಬ್ಯಾರಕ್ಗಳಲ್ಲಿಯೇ ಸಿಸಿ ಕ್ಯಾಮರಾಗಳನ್ನು ಅಳವಡಿಸಿದರೆ ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಅನುಕೂಲವಾಗಲಿದೆ.
ಪರಪ್ಪನ ಅಗ್ರಹಾರ ಕೇಂದ್ರಬಿಂದು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪ್ರಭಾವಿ ಕೈದಿಗಳಿಗೆ ರಾಜಾತಿಥ್ಯ, ಮೊಬೈಲ್ ಬಳಕೆ, ವಿಶೇಷ ಕೊಠಡಿಗಳು ಹಾಗೂ ನಿಯಮ ಉಲ್ಲಂಘನೆಗಳ ಆರೋಪಗಳು ಹಲವು ಬಾರಿ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸಮಿತಿ ನಡೆಸಿದ ಪರಿಶೀಲನೆಯಲ್ಲಿ ಇಂತಹ ಲೋಪಗಳನ್ನು ಉಲ್ಲೇಖಿಸಿ ಸುಧಾರಣಾ ಕ್ರಮಗಳನ್ನು ಶಿಫಾರಸು ಮಾಡಿದೆ.
ತಿಹಾರ್ ಮಾದರಿ: ವಿಚಾರಣಾಧೀನ ಕೈದಿಗಳಿಗೆ ಕೆಲಸ ನೀಡುವ ಕುರಿತು ಚರ್ಚೆ ನಡೆದಿರುವುದು ಮತ್ತೊಂದು ಪ್ರಮುಖ ಅಂಶ. ಜೈಲಿನಲ್ಲಿ ಕೌಶಲ್ಯಾಭಿವೃದ್ಧಿ, ಉತ್ಪಾದನಾ ಚಟುವಟಿಕೆ, ಕೈಗಾರಿಕಾ ತರಬೇತಿ ಹಾಗೂ ಆದಾಯ ಗಳಿಸುವ ಅವಕಾಶಗಳನ್ನು ಕಲ್ಪಿಸಿದರೆ, ಕೈದಿಗಳ ಮಾನಸಿಕ ಒತ್ತಡ ಕಡಿಮೆಯಾಗುವುದರ ಜತೆಗೆ ಬಿಡುಗಡೆಯ ನಂತರ ಸಮಾಜದಲ್ಲಿ ಪುನರ್ವಸತಿಗೂ ನೆರವಾಗಲಿದೆ.
ಅಧಿಕಾರಿಗಳ ಅಮಾನತು
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿತ್ತು. ಜೈಲಿನ ನಿಯಮ ಉಲ್ಲಂಘಿಸಿರುವ ಹಾಗೂ ಆಡಳಿತ ವೈಫಲ್ಯಕ್ಕಾಗಿ ಹಲವು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಜೈಲುಗಳ ಮೇಲೆ ನಿಗಾ ಇಡಲು ಕೇಂದ್ರೀಯ ಕಮಾಂಡ್ ಸೆಂಟರ್ ಸ್ಥಾಪನೆ ಮತ್ತು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿರಂತರ ದಾಳಿ ನಡೆಸುತ್ತಿರುವ ಕಾರಾಗೃಹ ಮತ್ತು ಸುಧಾರಣಾ ಇಲಾಖೆ, ಸಿಸಿಬಿ ಅಧಿಕಾರಿಗಳಿಗೆ ಕೈದಿಗಳ ಬ್ಯಾರಕ್ಗಳಲ್ಲಿ ಮೊಬೈಲ್ ಸಿಮ್ ಕಾರ್ಡ್, ಮಾದಕ ವಸ್ತು ದೊರೆಯುತ್ತಲೇ ಇವೆ.
ಮಹತ್ವದ ಹೆಜ್ಜೆ
ಸಮಿತಿ ಸಲ್ಲಿಸಿದ 53 ಅಂಶಗಳ ವರದಿ ಜೈಲು ಆಡಳಿತದಲ್ಲಿ ಪಾರದರ್ಶಕತೆ, ಭದ್ರತೆ ಮತ್ತು ಪುನರ್ವಸತಿ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ. ಸರ್ಕಾರ ಶಿಫಾರಸುಗಳನ್ನು ತ್ವರಿತವಾಗಿ ಜಾರಿಗೆ ತಂದರೆ ಜೈಲುಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳುವುದರ ಜತೆಗೆ ಕೈದಿಗಳ ಸುಧಾರಣೆ ಮತ್ತು ಸಮಾಜದ ಭದ್ರತೆಯೂ ಹೆಚ್ಚುವ ಸಾಧ್ಯತೆ ಇದೆ.
ಜೈಲಿನಲ್ಲಿ ಅಕ್ರಮ ತಡೆಯಲು ಗೃಹ ಇಲಾಖೆಗೆ ವಿಸõತ ವರದಿ ಸಲ್ಲಿಸಲಾಗಿದೆ. ವರದಿಯಲ್ಲಿನ ಎಲ್ಲ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದರೆ, ರಾಜ್ಯದ ಜೈಲುಗಳ ಸುಧಾರಣೆಯಾಗಲಿದೆ.
— ಆರ್. ಹಿತೇಂದ್ರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ
ಜೈಲುಗಳಲ್ಲಿ ಶೇ. 30ರಿಂದ 35ರಷ್ಟು ಜೈಲು ಸಿಬ್ಬಂದಿ ಕೊರತೆ ಇದೆ. ಇವುಗಳನ್ನು ತಕ್ಷಣ ಭರ್ತಿ ಮಾಡುವುದು, ಮೊಬೈಲ್ ಸಿಗ್ನಲ್ ಜಾಮರ್ಗಳನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು, ಡ್ರೋನ್ ಮೂಲಕ ಜೈಲುಗಳಿಗೆ ನಿಷೇಧಿತ ವಸ್ತುಗಳ ಸಾಗಾಟ ತಡೆಯಲು ವಿಶೇಷ ನಿಗಾ ವ್ಯವಸ್ಥೆ, ಕೈದಿಗಳ ವರ್ಗೀಕರಣವನ್ನು ವೈಜ್ಞಾನಿಕವಾಗಿ ಮಾಡುವುದು, ಸಿಬ್ಬಂದಿಗೆ ನಿಯಮಿತ ತರಬೇತಿ ಹಾಗೂ ಭ್ರಷ್ಟಾಚಾರ ನಿಯಂತ್ರಣ ವ್ಯವಸ್ಥೆ ಬಲಪಡಿಸುವುದು, ಜೈಲುಗಳ ಡಿಜಿಟಲ್ ನಿರ್ವಹಣೆ ಮತ್ತು ಇ-ಮಾನಿಟರಿಂಗ್ ವ್ಯವಸ್ಥೆ ಜಾರಿಗೆ ತರುವುದು, ಕೃತಕ ಬುದ್ಧಿ ಮತ್ತೆ ಕ್ಯಾಮರಾಗಳ ಹೆಚ್ಚಳ ಮಾಡುವ ಬಗ್ಗೆ ಉನ್ನತ ಮಟ್ಟದ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ. ಜೈಲುಗಳ ಒಳಗೆ ಮತ್ತು ಹೊರಗೆ ಸಿಸಿ ಕ್ಯಾಮರಾ ಅಳವಡಿಕೆ ಮಾಡುವುದರಿಂದ ಮಾತ್ರ ಸಮಸ್ಯೆ ಸಂಪೂರ್ಣ ಪರಿಹಾರವಾಗುವುದಿಲ್ಲ. ಜೈಲು ಸಿಬ್ಬಂದಿ ಹಾಗೂ ಕೈದಿಗಳ ಒಳಸಂಚು, ಭ್ರಷ್ಟಾಚಾರ, ರಾಜಕೀಯ ಅಥವಾ ಆರ್ಥಿಕ ಪ್ರಭಾವ, ತಂತ್ರಜ್ಞಾನ ನಿರ್ವಹಣೆಯ ಕೊರತೆ ಮುಂತಾದ ಮೂಲಭೂತ ಸಮಸ್ಯೆಗಳನ್ನು ಕೂಡ ಸರ್ಕಾರ ಪರಿಹರಿಸಬೇಕಾಗಿದೆ. ಇಲ್ಲವಾದರೆ ವರದಿ ಕಾಗದದಲ್ಲೇ ಉಳಿಯುವಂತಾಗಲಿದೆ.