ಮುಳಬಾಗಿಲಿನಲ್ಲಿ ಕ್ಯಾಮರಾ ಕಣ್ಗಾವಲು Camera
- 10 ಕಡೆ ಸಿಸಿ ಟಿವಿ ಅಳವಡಿಕೆ
- ಶಾಸಕ ಸಮೃದ್ಧಿ ವಿ.ಮಂಜುನಾಥ್ ಮಾಹಿತಿ
ಮುಳಬಾಗಿಲು: ನಗರದಲ್ಲಿ ದ್ವಿಚಕ್ರ ವಾಹನ ಕಳವು ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ನಿಗಾ ವಹಿಸಬೇಕು. ಜತೆಗೆ ಶಾಸಕರ ಅನುದಾನದಲ್ಲಿ ನಗರದಲ್ಲಿ ಹಾಗೂ ನಗರದ ಹೊರವಲಯಗಳ 10 ಕಡೆ ದೊಡ್ಡಮಟ್ಟದ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಇದರ ನೆರವಿನಿಂದ ಕಳ್ಳರನ್ನು ತಕ್ಷಣ ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಶಾಸಕ ಸಮೃದ್ಧಿ ವಿ. ಮಂಜುನಾಥ್ ತಿಳಿಸಿದರು. camera
ನಗರದ ನೇತಾಜಿ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಉಚಿತ ಹೆಲ್ಮೆಟ್ ವಿತರಣೆ ಹಾಗೂ ಸಂಚಾರ ನಿಯಮಗಳ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಮತದಾರರೇ, ಪ್ರಾಣ ಅತಿ ಮುಖ್ಯ. ಹಾಗಾಗಿ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ಮಾಡಬೇಕು ಎಂದು ಸಲಹೆ ನೀಡಿದರು.
ಅಪಘಾತ ರಹಿತ ಸಮಾಜ ನಿಮಾರ್ಣಕ್ಕೆ ಪ್ರತಿಯೊಬ್ಬರೂ ಜಾಗೃತಿಯಿಂದ ವಾಹನ ಚಲಾಯಿಸಬೇಕು. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವಂತಿಲ್ಲ. ನಾನು ನಿಮಗೆ ವೋಟ್ ಹಾಕಿದ್ದೇನೆ, ನಿಮ್ಮ ಪಕ್ಷದ ಮುಖಂಡ, ಕಾರ್ಯಕರ್ತ ಎಂದು ಹೇಳಿ ಫೋನ್ ಮಾಡುವುದು ಬಿಡಬೇಕು ಎಂದರು.
6 ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ತಂಬಹಳ್ಳಿ ನಲ್ಲೂರು ಗೇಟ್ ಸಮೀಪ ಹೆದ್ದಾರಿ ಗಸ್ತು ಪೊಲೀಸ್ ವಾಹನ ಪಕ್ಷದ ಕಾರ್ಯಕರ್ತರೊಬ್ಬರ ದ್ವಿಚಕ್ರ ವಾಹನ ತಡೆದಾಗ ನನಗೆ ಕರೆ ಮಾಡಿ ಪೊಲೀಸರಿಗೆ ಕೊಟ್ಟಿದ್ದರು. ಆ ಕಡೆಯಿಂದ ಕೊಟ್ಟಾಗ ಪೊಲೀಸರು ದ್ವಿಚಕ್ರ ವಾಹನದಲ್ಲಿ ಮೂವರು ಸವಾರರು ಕಂಠಪೂರ್ತಿ ಮದ್ಯಪಾನ ಮಾಡಿ ತೂರಾಡಿಕೊಂಡು ಹೋಗುತ್ತಿದ್ದಾರೆ. ಇದೇ ರೀತಿ ಹೋದರೆ ಅವರು ಮನೆ ಸೇರುವುದಿಲ್ಲ, ಮಸಣಕ್ಕೆ ಹೋಗುತ್ತಾರೆ ಎಂದಾಗ ತಕ್ಷಣ ಅವರನ್ನು ವಶಕ್ಕೆ ಪಡೆಯಿರಿ, ವಾಹನ ಬಿಡಬೇಡಿ ಎಂದು ಹೇಳಿದ್ದೆ. ನಾನುಶಾಸಕನಾಗಿರುವುದು ಸಾರ್ವಜನಿಕರ ಕೆಲಸಕ್ಕೆ ಮಾತ್ರ, ಕಾನೂನು ಬಾಹಿರ ಕೆಲಸಗಳಿಗಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಎಸ್.ಪಿ. ಬಿ.ನಿಖಿಲ್ ಮಾತನಾಡಿ, ಕೋಲಾರ ಜಿಲ್ಲಾ ಪೊಲೀಸ್ ಜನರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದೆ. ಹೆಲ್ಮೆಟ್ ಇಲ್ಲದೆ ಸಂಚರಿಸುವವರಿಂದ ದಂಡ ವಸೂಲಿ ಮಾಡುವುದು ಮುಖ್ಯವಲ್ಲ. ಡಿ.1 ರಿಂದ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸದೆ ಹೆಲ್ಮೆಟ್ ತೆಗೆದುಕೊಂಡು ಬಂದು ವಾಹನ ತೆಗೆದುಕೊಂಡು ಹೋಗಿ ಎಂಬ ಸೂಚನೆ ಮೂಲಕ ಜಾಗೃತಿ ಮೂಡಿಸಲಾಗಿತ್ತು. ಈಗ ಶಾಸಕರು ಮತ್ತು ದಾನಿಗಳ ನೆರವಿನಿಂದ ಉಚಿತವಾಗಿ 500 ಕ್ಕೂ ಹೆಚ್ಚು ಹೆಲ್ಮೆಟ್ ವಿತರಿಸಲಾಗಿದೆ. ಕುಟುಂಬವನ್ನು ಅನಾಥ ಮಾಡದೆ ಇರಲು ಧರಿಸುವುದು ಕಡ್ಡಾಯ ಎಂದರು.
ಸಹಾಯಕ ಪೊಲೀಸ್ ಅಧಿಕ್ಷಕಿ ಮನಿಷಾ, ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಿ.ಆರ್. ಸಂಗನಾಥ್, ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕೆ.ಜಿ ಸತೀಶ್, ಪಿಎಸ್ಐ ಅರುಣ್ ಗೌಡ ಪಾಟೀಲ್, ನಂಗಲಿ ಪೊಲೀಸ್ ಠಾಣೆ ಪಿಎಸ್ಐ ಎಚ್.ಡಿ ವಿದ್ಯಾಶ್ರೀ, ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ರಘುಪತಿರೆಡ್ಡಿ, ಜೆಡಿಎಸ್ ಮುಖಂಡ ಎಚ್. ಗೊಲ್ಲಹಳ್ಳಿ ಜಗದೀಶ್, ಕಸಾಪಜಿಲ್ಲಾ ಗಡಿನಾಡು ಪ್ರತಿನಿಧಿ ತಾಯಲೂರು ಗೋಪಿನಾಥ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗಗುರು ಮಿಟ್ಟೂರು ಎಂ.ಸುಬ್ಬರಾಯಪ್ಪ ಇದ್ದರು.