By-election results will not affect the government 
ರಾಜ್ಯ

ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪ್ರಭಾವ ಬೀರದು

ಗುಬ್ಬಿ: ಉಪಚುನಾವಣೆ ಸ್ಥಳಿಯ ಹಾಗೂ ಪ್ರಸ್ತುತ ವಿಚಾರದ ಮೇಲೆ ನಡೆಯುತ್ತವೆ. ಸರ್ಕಾರಕ್ಕೂ ಈ ಚುನಾವಣೆಗೂ ಯಾವ ಸಂಬಂಧವಿಲ್ಲ. ಇದರಿಂದ ಸರ್ಕಾರಕ್ಕೆ ಯಾವುದೇ ಪ್ರಭಾವ ಬೀರದು ಎಂದು ಶಾಸಕ ಎಸ್​.ಆರ್​.ಶ್ರೀನಿವಾಸ್​ ಅಭಿಪ್ರಾಯಪಟ್ಟರು.
ತಾಲೂಕಿನ ಕಡಬ ಹೋಬಳಿಯ ಹಲವು ಗ್ರಾಮದಲ್ಲಿ ಪಂಚಾಯತ್​ ರಾಜ್​ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅನುದಾನದಡಿ 12 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಉಪಚುನಾವಣೆಯ ಫಲಿತಾಂಶದಿಂದ ಸರ್ಕಾರಕ್ಕೆ ಯಾವ ಲಾಭ ನಷ್ಟವಿಲ್ಲ ಎಂದರು.
ಇರಾನ್​&ಇಸ್ರೇಲ್​ ಕದನ ವಿರಾಮ ಹೇಳಿಕೆ ಎಲ್ಲಿಯವರೆಗೆ ಎಂಬುದು ನೋಡಬೇಕಿದೆ. ಗ್ಯಾಸ್​ ಅಭಾವ ಮುಂದಿನ ದಿನಗಳಲ್ಲಿ ಸರಿ ಹೋಗಲಿದೆ ಎಂದರು. ಕಡಬ ಬಸ್​ ನಿಲ್ದಾಣಕ್ಕೆ ಮೂಲ ಸೌಕರ್ಯದ ಜತೆಗೆ ಮತ್ತಷ್ಟು ಮೇಲ್ದರ್ಜೆಗೇರಿಸಿ ಅಭಿವೃದ್ಧ್ಧಿ ಪಡಿಸಲಾಗುವುದು. ಗುಬ್ಬಿಯಲ್ಲಿ ಹೈಟೆಕ್​ ಬಸ್​ ನಿಲ್ದಾಣ ನಿಮಾರ್ಣಕ್ಕೆ ಚಾಲನೆ ಸದ್ಯದಲ್ಲೇ ನೀಡಲಾಗುವುದು. ಬಸ್​ ಡಿಪೋ ಕಾಮಗಾರಿಗೂ ಶೀಘ್ರ ಗ್ರೀನ್​ ಸಿಗ್ನಲ್​ ಸಿಗಲಿದೆ. ಕಡಬದಲ್ಲಿ ಸವಿತಾ ಸಮಾಜದ ಸಮುದಾಯ ಭವನಕ್ಕೆ ಈಗಾಗಲೇ 10 ಲಕ್ಷ ನೀಡಲಾಗಿದೆ. ಬಾಕಿ 20 ಲಕ್ಷ ಮಂಜೂರು ಮಾಡಿ ಭವನ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಬೆಲವತ್ತ ಗ್ರಾಮದಲ್ಲಿ ಅಗತ್ಯವಿದ್ದ ಸ್ತ್ರೀಶಕ್ತಿ ಭವನಕ್ಕೆ 15 ಲಕ್ಷ ರೂಗಳನ್ನು ನೀಡಿ ಪೂಜೆ ಸಲ್ಲಿಸಲಾಗಿದೆ. ಅರೆಮಾರನಹಳ್ಳಿ ಮೂಲಕ ಕಾಡಶೆಟ್ಟಿಹಳ್ಳಿವರೆಗೆ ಕೆರೆ ವಿಸ್ತರಣೆ ಹಾಗೂ ರಸ್ತೆ ನಿಮಾರ್ಣಕ್ಕೆ 7.80 ಕೋಟಿ ರೂ. ಕೆಲಸಕ್ಕೆ ಚಾಲನೆ ನೀಡಲಾಗಿದೆ. ಕಡಬ ಹಾಗೂ ದಾಸರಕಲ್ಲಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ, ಬಾಕ್ಸ್​ ಚರಂಡಿ ನಿಮಾರ್ಣಕ್ಕೆ 4.70 ಕೋಟಿ ರೂ. ಕಾಮಗಾರಿಗೂ ಇಂದು ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.