Businessmen face problems due to sudden notification 
ರಾಜ್ಯ

ಏಕಾಏಕಿ ಸೂಚನೆಯಿಂದ ವ್ಯಾಪಾರಸ್ಥರಿಗೆ ಸಮಸ್ಯೆ

ತುಮಕೂರು ಡೆಸ್ಕ್
ಮಧುಗಿರಿ: ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿರುವರನ್ನು ಸ್ಥಳಾಂತರಿಸುವಂತೆ ಪುರಸಭೆ ಸೂಚಿಸಿರುವುದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿ ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಪುರಸಭೆ ಮುಖ್ಯಾಧಿಕಾರಿ ಎಸ್​.ಸುರೇಶ್​ ಅವರಿಗೆ ಮನವಿ ಸಲ್ಲಿಸಲಾಯಿತು.
ಮಧುಗಿರಿ ಪಟ್ಟಣದ ಡೂಂಲೈಟ್​ ವೃತ್ತದಿಂದ ಟಿ.ವಿ.ವೆಂಕಟ ಸ್ವಾಮಿ ಪೆಟ್ರೋಲ್​ ಬಂಕ್​ ರಸ್ತೆ ವರೆಗೂ ಪುರಸಭೆ ವ್ಯಾಪ್ತಿಯ ಸ್ಥಳದಲ್ಲಿ ಬೀದಿಬದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವವರಿಗೆ ಪೂರ್ವ ಸೂಚನೆ ನೀಡದೆ ಏಕಾಏಕಿ ತೆರವುಗೊಳಿಸುವಂತೆ ಏಕಾಏಕಿ ಸೂಚನೆಯಿಂದ ವ್ಯಾಪಾರಸ್ಥರು ಆತಂಕಕ್ಕೀಡಾಗಿದ್ದಾರೆ. ಮಾನವೀಯ ಮತ್ತು ಕಾನೂನು ದೃಷ್ಟಿಯಿಂದ ಪರಿಶೀಲಿಸಿ ಸಹಾನುಭೂತಿಯ ತೀಮಾರ್ನ ಕೈಗೊಳ್ಳಬೇಕು. ವ್ಯಾಪಾರಸ್ಥರಿಗೆ ವ್ಯಾಪಾರ ಮುಂದುವರಿಸಲು ಸಮರ್ಪಕ ಪರ್ಯಾಯ ವ್ಯವಸ್ಥೆ ಒದಗಿಸಿದ ನಂತರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಬೀದಿಬದಿ ವ್ಯಾಪಾರಿಗಳ ಗುರುತಿನ ಚೀಟಿ, ಮಾರಾಟ ಪ್ರಮಾಣಪತ್ರ, ವ್ಯಾಪಾರ ನೋಂದಣಿ ಹಾಗೂ ಇತರ ಸಂಬಂಧಿತ ದಾಖಲೆಗಳಲ್ಲಿ ಹಾಲಿ ವ್ಯಾಪಾರ ನಡೆಸುತ್ತಿರುವ ಬಗ್ಗೆ ಉಲ್ಲೇಖವಾಗಿರುವುದರಿಂದ ಏಕಾಏಕಿ ವಿಳಾಸವನ್ನು ಬದಲಿಸುವುದು, ತೆರವುಗೊಳಿಸುವುದು ಕಾನೂನಾತ್ಮಕವಾಗಿ ಹಾಗೂ ಜೀವನೋಪಾಯದ ದೃಷ್ಟಿಯಿಂದ ಸಮಸ್ಯೆಯಾಗುತ್ತದೆ ಎಂದು ವಿವರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ, ಬೀದಿ ಬದಿ ವ್ಯಾಪಾರಿಗಳು ಸಂಚಾರಕ್ಕೆ ತೊಂದರೆ ಆಗದ ರೀತಿ ಅಂಗಡಿ ಇಟ್ಟುಕೊಳ್ಳಬೇಕು. ಪುರಸಭೆಯಿಂದ ಅನುಮತಿ ಪಡೆದವರು ಮಾತ್ರ ವ್ಯಾಪಾರ ಮಾಡಬೇಕು. ಹೆಸರೊಬ್ಬರದು ವ್ಯಾಪಾರ ಒಬ್ಬರದು ಆದರೆ ಸಹಿಸುವುದಿಲ್ಲ. ಮದುಗಿರಿಯಲ್ಲಿ ಯಾವುದೇ ಸುಂಕ ನೆಲವಳಿ ಇಲ್ಲದ ಕಾರಣ ಯಾರೊಬ್ಬರಿಗೂ ರೋಲ್​ ಕಾಲ್​ ನೀಡುವಂತಿಲ್ಲ ಎಂದು ಸೂಚಿಸಿದರು.
ಬದಿ ವ್ಯಾಪಾರಿಗಳ ತುಮಕೂರು ಜಿಲ್ಲಾಧ್ಯಕ್ಷ ಭದ್ರೇಗೌಡ, ತಾಲೂಕು ಅಧ್ಯಕ್ಷ ಗುರುರಾಜು, ದಾಸರಹಳ್ಳಿ ಶ್ರೀರಂಗಯ್ಯ, ಕೃಷ್ಣಪ್ಪ, ಶಿವಮ್ಮ, ಚಿಕ್ಕರಂಗಯ್ಯ, ಲಕ್ಷ್ಮಮ್ಮ, ಮಂಜುನಾಥ್​ ಹಾಗೂ ನೂರಾರು ಬೀದಿಬದಿ ವ್ಯಾಪಾರಿಗಳು ಇದ್ದರು.