ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಬಾಚಹಳ್ಳಿ ಗ್ರಾಮದಿಂದ ಪಟ್ಟಣಕ್ಕೆ ಹೋಗುತ್ತಿದ್ದ ಬಸ್ ಕೆಟ್ಟಿದ್ದರಿಂದ ವಿದ್ಯರ್ಥಿಗಳು ಹಾಗೂ ಪ್ರಯಾಣಿಕರು ಬೇರೆ ಬಸ್‌ಗಾಗಿ ಕಾಯುತ್ತಿರುವುದು.  
ರಾಜ್ಯ

ಕೆಟ್ಟು ನಿಲ್ಲುವ ಬಸ್‌ಗಳಿಂದ ಪದಾಟ

ವಸಂತಕುಮಾರ್ ಬಿ
ಗುಂಡ್ಲುಪೇಟೆ: ಗ್ರಾಮಾಂತರ ಪ್ರದೇಶಗಳಿಗೆ ಹೋಗುವ ಬಸ್‌ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದರೂ ಸಾರಿಗೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ತಾಲೂಕಿನ ಬಾಚಹಳ್ಳಿ ಗ್ರಾವಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಕಾಡಂಚಿನಲ್ಲಿರುವ ಗ್ರಾಮದ ಜನರು ಪಟ್ಟಣಕ್ಕೆ ಹೋಗಲು ಸಾರಿಗೆ ಬಸ್ಸುಗಳನ್ನೇ ಅವಲಂಬಿಸಿದ್ದಾರೆ. ಆದರೆ ಇತ್ತೀಚೆಗೆ ಸಾರಿಗೆ ಸಂಸ್ಥೆಯು ತನ್ನ ಬಸ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ವಾರದಲ್ಲಿ ಒಂದೆರಡು ದಿನ ಕೆಟ್ಟು ನಿಲ್ಲುತ್ತಿವೆ. ಕಾಡಂಚಿನ ಗ್ರಾಮವಾಗಿದ್ದರಿಂದ ಈ ಮಾರ್ಗದಲ್ಲಿ ಹೆಚ್ಚಿನ ಬಸ್‌ಗಳ ಸಂಚಾರವಿಲ್ಲದೆ ಬೆಳಗ್ಗೆ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೋಗುವ ರೋಗಿಗಳು ಹಾಗೂ ಸಾರ್ವಜನಿಕರು ಪದೇ ಪದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಟ್ಟುನಿಲ್ಲುವ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಬದಲಿ ಸ್ ಬರುವವರೆಗೆ ಗಂಟೆಗಟ್ಟಲು ಕಾಯುವಂತಾಗಿದೆ.

ಬೇರೆ ಮಾರ್ಗದಲ್ಲಿ ಬರುವ ಬಸ್‌ಗಳಲ್ಲಿ ಪ್ರಯಾಣಿಕರು ಭರ್ತಿಯಾಗಿರುವುದರಿಂದ ಮಹಿಳೆಯರು ಮತ್ತು ಮಕ್ಕಳು ಬಸ್ ಹತ್ತಲು ಪರದಾಡುವ ಜತೆಗೆ ಸೀಟು ಸಿಗದೆ ನಿಂತುಕೊಂಡೇ ಪ್ರಯಾಣಿಸಬೇಕಾಗಿದೆ. ಇದರಿಂದ ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಸಕಾಲಕ್ಕೆ ಶಾಲೆಗಳಿಗೆ ಹೋಗಲು ಸಾಧ್ಯವಾಗದೆ ಕಲಿಕೆಯಲ್ಲಿ ಹಿನ್ನಡೆಯಾಗುತ್ತಿದೆ. ಸಕಾಲದಲ್ಲಿ ಆಸ್ಪತ್ರೆಗೆ ಹೋಗಲಾಗದೆ ರೋಗಿಗಳು ಪರಿತಪಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ನಟ್ಟು ಬೋಲ್ಟುಗಳು ಸಡಿಲವಾಗಿ ಚಕ್ರವು ಕಳಚಿದ್ದ ಘಟನೆ ಸಹಾ ನಡೆದಿತ್ತು. ಆದರೂ ಸಾರಿಗೆ ಅಧಿಕಾರಿಗಳು ಎಚ್ಚತ್ತುಕೊಳ್ಳದೆ ತಮ್ಮ ನಿರ್ಲಕ್ಷ್ಯ ಮುಂದುವರೆಸಿದ್ದಾರೆ ಎಂದು ಸಾರ್ವಜನಿಕರು ಸಾರಿಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಆದ್ದರಿಂದ ಸಾರಿಗೆ ಅಧಿಕಾರಿಗಳು ಇನ್ನಾದರೂ ಗ್ರಾಮಾಂತರ ಪ್ರದೇಶಗಳಿಗೆ ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ನಿಯೋಜಿಸಬೇಕು. ಮತ್ತೊಮ್ಮೆ ಬಸ್‌ಗಳು ಕೆಟ್ಟು ಹೋದರೆ ಡಿಪೋಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮದ ಮುಖಂಡ ಮಣಿ ಎಚ್ಚರಿಕೆ ನೀಡಿದ್ದಾರೆ.