ಬೆಂಗಳೂರು: ಸದಾ ಒತ್ತಡದ ಕೆಲಸ, ರಜೆ ಇಲ್ಲದ ಕರ್ತವ್ಯ ಹಾಗೂ ಕುಟುಂಬದಿಂದ ದೂರ ಉಳಿಯುವ ಪೊಲೀಸ್ ಸಿಬ್ಬಂದಿಯ ಮಾನಸಿಕ ಆರೋಗ್ಯ ಮತ್ತು ಸಂತೋಷಕ್ಕೆ ಆದ್ಯತೆ ನೀಡಿರುವ ಕರ್ನಾಟಕ ಪೊಲೀಸ್ ಇಲಾಖೆ, ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ಮುಂದೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹುಟ್ಟುಹಬ್ಬ (Birthday) ಹಾಗೂ ಮದುವೆ ವಾರ್ಷಿಕೋತ್ಸವದ (Wedding Anniversary) ದಿನದಂದು ಕಡ್ಡಾಯವಾಗಿ ರಜೆ ಪಡೆಯಲಿದ್ದಾರೆ.
ಹೌದು, ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾದ (DGP) ಎಂ.ಎ. ಸಲೀಂ ಅವರು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ?
ಪೊಲೀಸ್ ಇಲಾಖೆಯ ಕೆಲಸವು ಅತ್ಯಂತ ಸವಾಲಿನದ್ದಾಗಿದ್ದು, ಸಿಬ್ಬಂದಿಗಳು ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ದಿನಗಳಂದು ರಜೆ ಪಡೆಯುವುದು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾವನಾತ್ಮಕವಾಗಿ ಪುನಶ್ಚೇತನಗೊಳ್ಳಲು ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು ಸಹಾಯ ಮಾಡುತ್ತದೆ" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕುಟುಂಬದೊಂದಿಗೆ ಸಂಭ್ರಮ ಆಚರಿಸುವುದರಿಂದ ಸಿಬ್ಬಂದಿಯ ನೈತಿಕ ಸ್ಥೈರ್ಯ ಹೆಚ್ಚುತ್ತದೆ, ಕೆಲಸದಲ್ಲಿ ತೃಪ್ತಿ ಸಿಗುತ್ತದೆ ಮತ್ತು ಇದು ಅಂತಿಮವಾಗಿ ಇಲಾಖೆಯ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಸತತ ಕೆಲಸದಿಂದ ಉಂಟಾಗುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಈ 'ಸಂತೋಷದ ರಜೆ' ರಾಮಬಾಣವಾಗಲಿದೆ ಎಂದು ಡಿಜಿಪಿ ಅಭಿಪ್ರಾಯಪಟ್ಟಿದ್ದಾರೆ.
ಸಿಬ್ಬಂದಿಗಳಲ್ಲಿ ಹರ್ಷ
ಇಲಾಖೆಯ ಈ ನಿರ್ಧಾರಕ್ಕೆ ಕೆಳಹಂತದ ಪೇದೆಗಳಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷ ದಿನಗಳಲ್ಲಿ ರಜೆ ಸಿಗದೆ ಮನೆಯವರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗದ ನೋವಿನಲ್ಲಿದ್ದ ಪೊಲೀಸರಿಗೆ ಇದು ದೊಡ್ಡ ರಿಲೀಫ್ ನೀಡಿದೆ. "ನಮ್ಮ ವೈಯಕ್ತಿಕ ಜೀವನದ ಸಣ್ಣ ಸಂತೋಷಗಳನ್ನು ಗುರುತಿಸಿ ರಜೆ ನೀಡುತ್ತಿರುವುದು ನಮ್ಮ ಕೆಲಸದ ಮೇಲಿನ ಗೌರವವನ್ನು ಹೆಚ್ಚಿಸಿದೆ" ಎಂದು ಪೊಲೀಸ್ ಪೇದೆಯೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).