ಕೊಳವಿ ಗ್ರಾಮದ ಶ್ರೀ ಗೂಳಿ ಬಸವೇಶ್ವರ ದೇವಸ್ಥಾನ.
ಸಮೀಪದ ಸುಕ್ಷೇತ್ರ ಕೊಳವಿ ಗ್ರಾಮದ ಆರಾಧ್ಯ ಧೈವ ಶ್ರೀ ಗೂಳಿ ಬಸವೇಶ್ವರ ಹಾಗೂ ಶ್ರೀ ಬೀರಸಿದ್ದೇಶ್ವರ ಮಹಿಮೆ ಅಪಾರವಾಗಿದ್ದು, ದೇವಸ್ಥಾನಕ್ಕೆ ನೂರು ವರ್ಷಗಳ ಇತಿಹಾಸವಿದೆ.
ಇಂಥಹ ಐತಿಹಾಸಿಕ ದೇವಸ್ಥಾನದಲ್ಲಿ ಕಳೆದ ಐದು ವರ್ಷಗಳಿಂದ ಆರು ದಿನಗಳವರೆಗೆ ಸಂಭ್ರಮದ ಕಾರ್ತಿಕ ಮಹೋತ್ಸವ ನೆರವೇರುತ್ತಿದೆ. ಇಲ್ಲಿ ನಡೆಯುವ ರಾಜ್ಯಮಟ್ಟದ ತೆರೆ ಬಂಡಿ ಸ್ಪರ್ಧೆ ಜಿಲ್ಲೆಯಲ್ಲೇ ಹೆಸರಾಗಿದೆ.
ಹಾವು ಕಡಿತ ವಾಸಿ: ದೇಗುಲದ ದರ್ಶನ ಹಾಗೂ ತೀರ್ಥದಿಂದ ಹಾವು ಕಡಿದ ಸಹಸ್ರಾರು ಜನ&ಜಾನುವಾರುಗಳ ಪ್ರಾಣ ಉಳಿದಿದೆ. ಇಂತಹ ಪವಾಡ ಇಂದಿನ ವೈಜ್ಞಾನಿಕ ದಿನಗಳಲ್ಲಿ ವಿಸ್ಮಯಕಾರಿಯಾಗಿದೆ. ಗ್ರಾಮದ 80ಕ್ಕೂ ಹೆಚ್ಚು ಯುವಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ನ.23ರಿಂದ ಕಾರ್ತಿಕ ಮಹೋತ್ಸವ: ಗ್ರಾಮದ ಶ್ರೀ ಗೂಳಿ ಬಸವೇಶ್ವರ ಹಾಗೂ ಶ್ರೀ ಬೀರಸಿದ್ದೇಶ್ವರ ದೇವಸ್ಥಾನದಲ್ಲಿ ನ.23 ರಿಂದ 26ರ ವರೆಗೆ ಕಾರ್ತಿಕ ಮಹೋತ್ಸವ ಜರುಗಲಿದೆ. 23 ರಂದು ಶ್ರೀ ಬೀರಸಿದ್ದೇಶ್ವರ ಗದ್ದುಗೆಗೆ ವಿಶೇಷ ಪೂಜೆ ನೆರವೇರಲಿದೆ. ಸಂಜೆ 5 ಗಂಟೆಗೆ ಸ್ಥಳಿಯ ಎಲ್ಲ ದೇವರ ಪಲ್ಲಕ್ಕಿ ಆಗಮನ ಹಾಗೂ ಪಲ್ಲಕ್ಕಿ ಉತ್ಸವದೊಂದಿಗೆ ದೀಪೋತ್ಸವಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 9 ಗಂಟೆಗೆ ಮಹಾಪ್ರಸಾದ, ರಾತ್ರಿ ಡೊಳ್ಳಿನ ಪದ ಜರುಗಲಿವೆ.
ನ.24ರಂದು ಗೂಳಿ ಬಸವೇಶ್ವರ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಅಲಂಕಾರ ಹಾಗೂ ಮಹಾಮಂಗಳಾರತಿ, ದೇವಸ್ಥಾನದ ಆವರಣದಲ್ಲಿನ ಶಿವನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಬೆಳಗ್ಗೆ 9 ಗಂಟೆಗೆ ಯುವಕರ ಓಟದ ಸ್ಪರ್ಧೆ, ಕುದುರೆ ಸ್ಪರ್ಧೆ, ಸೈಕಲ್ ಸ್ಪರ್ಧೆ ಹಾಗೂ ಕಬ್ಬಡ್ಡಿ ಪಂದ್ಯಾವಳಿ ನಡೆಯಲಿವೆ. ಸಂಜೆ 5ಕ್ಕೆ ಭಜನೆ, ಪಲ್ಲಕ್ಕಿ ಉತ್ಸವ ಹಾಗೂ ಗ್ರಾಮಸ್ಥರಿಂದ ನೈವೇದ್ಯ ಅರ್ಪಣೆ ನಡೆಯಲಿದೆ. ಶಿವ ಭಜನೆ, ತವಗ ಮಠದ ಬ್ರಹ್ಮಶ್ರೀ ಸಿದ್ಧ್ದಲಿಂಗಯ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೀಪೋತ್ಸವಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 10.30ಕ್ಕೆ "ಸಾಕು ಮಗ ಸರ್ದಾರ' ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ನ.25ರಂದು ಬೆಳಗ್ಗೆ 10 ಗಂಟೆಗೆ ತೆರೆ ಬಂಡಿ ಸ್ಪರ್ಧೆ ನಡೆಯಲಿದೆ. ತವಗ ಮೇಲಿನ ಮಠದ ಬಾಳಯ್ಯ ಸ್ವಾಮೀಜಿ, ಹೂಲಿಕಟ್ಟಿಯ ಕುಮಾರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮರನಾಥ ಜಾರಕಿಹೊಳಿ ಚಾಲನೆ ನೀಡುವರು. ಮುಖ್ಯಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯ ಬಸಗೌಡ ಪಾಟೀಲ, ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಪತ್ರಯ್ಯ ಹುಲಕಂತಿಮಠ, ಬಸಯ್ಯ ಹುಲುಕಂತಿಮಠ, ಶಂಕರಯ್ಯ ಮಠಪತಿ, ಕಾಡಯ್ಯ ಮಠಪತಿ ಪಾಲ್ಗೊಳ್ಳಲಿದ್ದಾರೆ.