ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಗಾಲ್ಫ್ ಕೋರ್ಸ್ ನಿರ್ಮಿಸಿ. ಆಗ ಬೆಂಗಳೂರು ಗಾಲ್ಫ್ ಕ್ಲಬ್ 150 ವರ್ಷಗಳ ಸಂಭ್ರಮಕ್ಕೆ ಅರ್ಥ ಬರುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲಹೆ ನೀಡಿದ್ದಾರೆ.
ಸ್ಯಾಂಕಿ ರಸ್ತೆಯ ಗಾಲ್ಫ್ ಕ್ಲಬ್‌ನಲ್ಲಿ ನಡೆದ ಬೆಂಗಳೂರು ಗಾಲ್ಫ್ ಕ್ಲಬ್‌ನ 150ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕ್ಲಬ್ಗೆ ದೊಡ್ಡ ಇತಿಹಾಸವಿದೆ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ. ನೀವುಗಳು ಯಾರೂ ಸಣ್ಣವರಲ್ಲ. ಬೆಂಗಳೂರು ಕಟ್ಟುವ ಸಾಮರ್ಥ್ಯ ಇರುವ ಅಧಿಕಾರಿಗಳು, ಉದ್ಯಮಿಗಳು ಇದ್ದೀರಿ. 150 ವರ್ಷದ ಇತಿಹಾಸವಿರುವ ಗಾಲ್ಫ್ ಕ್ಲಬ್, ಇಷ್ಟು ಹೊತ್ತಿಗೆ ಬೆಂಗಳೂರಿನಲ್ಲಿ ಮೂರು-ನಾಲ್ಕು ಗಾಲ್ಫ್ ಕೋರ್ಸ್ ನಿರ್ಮಿಸಬೇಕಾಗಿತ್ತು ಎಂಬುದು ನನ್ನ ಅಭಿಪ್ರಾಯ. ನಿಮ್ಮಲ್ಲಿ ಏನು ಕಡಿಮೆ ಇದೆ ಎಂದು ಪ್ರಶ್ನಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗಾಗಿ ಬಂದಾಗ, ಇಡೀ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು. ಈ ವಿಚಾರವನ್ನು ನಾನು ವಿಧಾನಸಭೆಯಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಿದ್ದೇನೆ. ಕಾಲ ಮಿಂಚಿಲ್ಲ. ಈಗಲೂ ಸಮಯವಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನನಗೆ ಅರಿವಿದೆ ಎಂದರು.
ದಾವೋಸ್‌ಗೆ ಹೋಗಿದ್ದಾಗ, ಮಹಾರಾಷ್ಟ್ರ ಸಿಎಂ ಬಂದು ನೀವು ಯಾವುದೇ ಒಪ್ಪಂದಕ್ಕೆ ಸಹಿ ಹಾಕುತ್ತಿಲ್ಲ ಯಾಕೆ ಎಂದರು. ಅದಕ್ಕೆ ನಾನು, ಅದರ ಅವಶ್ಯಕತೆ ಇಲ್ಲ. ಬೆಂಗಳೂರಿನ ಹವಾಮಾನ, ಮಾನವ ಸಂಪನ್ಮೂಲಗಳು ಬೇರೆ ಎಲ್ಲೂ ಇಲ್ಲ. ಸಿಲಿಕಾನ್ ಸಿಟಿ ಕ್ಯಾಲಿಫೋರ್ನಿಯದಲ್ಲಿ 13 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದರೆ ಬೆಂಗಳೂರಿನಲ್ಲಿ 26 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದಾರೆ. ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳಿದ್ದು, ಪ್ರತಿವರ್ಷ 13 ಸಾವಿರಕ್ಕೂ ಹೆಚ್ಚು ವೈದ್ಯರು ತಯಾರಾಗುತ್ತಾರೆ. 270 ಇಂಜಿನಿಯರಿಂಗ್ ಕಾಲೇಜುಗಳಿವೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, 1.35 ಕೋಟಿ ವಾಹನಗಳಿವೆ. ಅಲ್ಲಿಗೆ ಸರಾಸರಿ ಒಬ್ಬರಿಗೆ ಒಂದು ವಾಹನಗಳಿವೆ. ಬೇರೆ ನಗರಗಳಲ್ಲಿ ಶೇ.19 ವಿಸ್ತೀರ್ಣದಷ್ಟು ರಸ್ತೆಗಳಿವೆ. ನಮ್ಮಲ್ಲಿ ಕೇವಲ ಶೇ.8 ರಸ್ತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಂಚಾರದಟ್ಟಣೆ ಸಮಸ್ಯೆ ಹೆಚ್ಚಾಗಿದೆ. ಬೆಂಗಳೂರು ಯೋಜಿತನಗರವಲ್ಲ. ಮುಂದೆ ವಿಸ್ತರಣೆ ಮಾಡಬೇಕಾದರೆ ಇದರ ಬಗ್ಗೆ ಆಲೋಚನೆ ಮಾಡಬೇಕಲ್ಲವೇ? ಈಗಲಾದರೂ 200 ಎಕರೆ ಜಾಗ ಇದ್ದರೆ ಹುಡುಕಿ ಎಂದು ಸಿಎಂ ಸಲಹೆ ನೀಡಿದರು.
ಟೀಕೆ ಮಾಡುವವರು ಮಾಡಲಿ
ಬೆಂಗಳೂರಿನಲ್ಲಿ ಹಸಿರು ಹೆಚ್ಚಿಸಲು ನನಗೆ ಆಸಕ್ತಿ ಇದೆ. ಕಬ್ಬನ್ ಪಾರ್ಕ್, ಲಾಲ್ ಬಾಗ್ ಬಿಟ್ಟರೆ ಬೇರೆ ಎಲ್ಲಿದೆ ಜಾಗ? ಹೀಗಾಗಿ ಅರಣ್ಯ ಇಲಾಖೆ ಜತೆ ಚರ್ಚೆ ಮಾಡಿ ಬೆಂಗಳೂರಿನ 18 ಕಿ.ಮೀ. ಸುತ್ತಮುತ್ತ ಎಲ್ಲೆಲ್ಲಿ ಅರಣ್ಯ ಇಲಾಖೆ ಜಾಗ ಇದೆಯೋ ಅವುಗಳನ್ನು ಖಾಲಿ ಬಿಡುವ ಬದಲು ಪಾರ್ಕ್ ನಿರ್ಮಿಸಿ ಎಂದು ಡಿ.ಕೆ. ಶಿವಕುಮಾರ್ ಸೂಚಿಸಿದರು.
ಬೆಂಗಳೂರಿನ ಭವ್ಯತೆ ಹೆಚ್ಚಿಸಿದೆ
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಬೆಂಗಳೂರಿನ ಸೌಂದರ್ಯಕ್ಕೆ ಕಳೆ ಕಟ್ಟುವುದು ನಮ್ಮ ಆಡಳಿತ ಕೇಂದ್ರವಾದ ವಿಧಾನಸೌಧದ ಭವ್ಯತೆ. ಅದು ಅಷ್ಟು ಭವ್ಯವಾಗಿ ಕಾಣಲು ಅದರ ಸುತ್ತಲೂ ಇರುವ ಹಸಿರು. ಕಬ್ಬನ್ ಪಾರ್ಕ್, ಬೆಂಗಳೂರು ಗಾಲ್ಫ್ ಕ್ಲಬ್, ಬೆಂಗಳೂರು ಟರ್ ಕ್ಲಬ್, ಕ್ರಿಕೆಟ್ ಮೈದಾನ. ಗಾಲ್ಫ್ ಕ್ಲಬ್ ಮೈಸೂರು ಮಹಾರಾಜರು ನಿರ್ಮಿಸಿದ್ದು, ಇದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.