ಬನಹಟ್ಟಿಯ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ಮಲ್ಲಿಕಾರ್ಜುನ ತುಂಗಳ, ಮಹಾದೇವ ಸರಸ್ವತಿ ಸ್ವಾಮಿಜಿ ಇತರರಿದ್ದರು.
- ಶಾಸಕ ಸಿದ್ದು ಸವದಿ ಹೇಳಿಕೆ
- ಧಾರ್ಮಿಕ ಸಭೆ ಆಯೋಜನೆ
ರಬಕವಿ/ಬನಹಟ್ಟಿ: ಸರ್ಕಾರದಿಂದ ಸಾಧ್ಯವಾಗದ ಅನೇಕ ಸಮಾಜಮುಖಿ ಕಾರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಯಶಸ್ವಿಯಾಗಿ ಕೈಗೊಳ್ಳುತ್ತಿದ್ದು, ಅವರ ಸೇವಾ ಕಾರ್ಯಗಳು ಇತಿಹಾಸದಲ್ಲಿ ದಾಖಲಿಸುವಂತಹವು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಬನಹಟ್ಟಿಯ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಧರ್ಮಸ್ಥಳ ಸಂಸ್ಥೆ ನಿರಂತರವಾಗಿ ಮಾಡುತ್ತಿರುವ ಸೇವಾ ಕಾರ್ಯಗಳು ಮಾದರಿಯಾಗಿವೆ ಎಂದರು.
ಸಮಾಜದ ವಿವಿಧ ವರ್ಗಗಳ ಜನರ ಜೀವನಮಟ್ಟ ಸುಧಾರಿಸಲು ಸಂಸ್ಥೆ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಜನರು ದುಶ್ಚಟಗಳಿಂದ ದೂರವಾಗಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಶಿಬಿರಗಳು ಹಾಗೂ ಜಾಗತಿ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ ಎಂದು ಹೇಳಿದರು.
ಬನಹಟ್ಟಿ ದೈವ ಮಂಡಳಿ ಚೇರ್ಮನ್ ಮಲ್ಲಿಕಾರ್ಜುನ ತುಂಗಳ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಜನರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು, ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಸಂಘಟಿತರಾಗಿ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಕವಿತಾ ಕೊಣ್ಣೂರ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಮದ್ಯಪಾನ ಹಾಗೂ ಇತರ ದುಶ್ಚಟಗಳಿಂದ ಕುಟುಂಬಗಳು ಹಾಗೂ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಯುವಜನರು ದುಶ್ಚಟಗಳಿಂದ ದೂರವಿದ್ದು, ಸನ್ಮಾರ್ಗದಲ್ಲಿ ಸಾಗಲು ಧರ್ಮಸ್ಥಳ ಸಂಸ್ಥೆ ವಿವಿಧ ರೀತಿಯಲ್ಲಿ ಪ್ರೇರಣೆ ನೀಡುತ್ತಿದೆ ಎಂದರು.
ಮುಮ್ಮುಕ್ಷಮಠದ ಮಹಾದೇವ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಗಿಡದಾನಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಚಂದ್ರಶೇಖರ ಆರ್., ನಂದು ಗಾಯಕವಾಡ, ಚನ್ನಕೇಶವ, ಗುರುಸಿದ್ಧಪ್ಪ ಚನಾಳ, ಶ್ರೀಶೈಲ ದಭಾಡಿ, ಶಿವಾನಂದ ಎಂ.ವೈ., ನಿಂಗಪ್ಪ ಜಿ., ಈರಣ್ಣ ಶಿರಹಟ್ಟಿ ಇತರರಿದ್ದರು.