ಆನೇಕಲ್​ ಚಂದನ ಸೇವಾ ಟ್ರಸ್ಟ್​ನಿಂದ ಶಿಕ್ಷಕರ ಸಂದ ಚುನಾಯಿತ ಪ್ರತಿನಿಧಿಗಳು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು. 
ರಾಜ್ಯ

ಮಾದಕ ವ್ಯಸನದಿಂದ ದೂರವಿದ್ದು ಬದುಕು ರೂಪಿಸಿಕೊಳ್ಳಿ / ANEKAL

ಆನೇಕಲ್​ : ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿರಬೇಕು ಎಂದು ಸೂರ್ಯನಗರ ಪೊಲೀಸ್​ ಠಾಣೆ ಸಿಪಿಐ ಚಂದ್ರಪ್ಪ ಎಚ್ಚರಿಕೆ ನೀಡಿದರು.
ಸೂರ್ಯನಗರ ಮೊದಲನೇ ಹಂತದಲ್ಲಿ ಶನಿವಾರ ಆನೇಕಲ್​ ಚಂದನ ಸೇವಾ ಟ್ರಸ್ಟ್​ನಿಂದ ಪೊಲೀಸ್​ ಅಧಿಕಾರಿಗಳು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾಯಿತ ಪ್ರತಿನಿಧಿಗಳು ಮತ್ತು ಮತ್ತು ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಸುದಂರ ಮೂರ್ತಿಗಳನ್ನಾಗಿ ರೂಪಿಸುವ ಶಿಕ್ಷಕರು, ಅವರ ಭವಿಷ್ಯದ ಬದುಕನ್ನು ಬದಲಾಯಿಸುವ ಶಕ್ತಿ ಹೊಂದಿರುತ್ತಾರೆ. ಆದರೆ ಅಂತಹ ಗುರುಗಳ ಮಾತುಗಳನ್ನೂ ಲೆಕ್ಕಿಸದೆ, ಪಾಲಕರ ಮಾತನ್ನೂ ಕೇಳದ ಕೆಲ ಮಕ್ಕಳು ಮಾದಕ ವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಕರ ಮಾತು ಕೇಳಿ ಚೆನ್ನಾಗಿ ಓದಿದವರು ಬದುಕು ಕಟ್ಟಿಕೊಂಡಿದ್ದಾರೆ. ಇದು ಸಮಾಜದಲ್ಲಿ ನಾವು ನಿತ್ಯ ಕಾಣುವ ಸತ್ಯ ಎಂದರು.
ಗುರುವಿನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಕೋಪವುಳ್ಳ ವ್ಯಕ್ತಿ ಹೃದಯವಂತಿಕೆ ಹೊಂದಿರುತ್ತಾನೆ. ಅಂತಹವರಿಂದಲೇ ಬದುಕು ಬದಲಾವಣೆ ಸಾಧ್ಯ. ಹಾಗಾಗಿ ಶಾಲೆಗಳಲ್ಲಿ ಶಿಕ್ಷಕರು ಹೇಳಿಕೊಡುವ ಪಾಠ, ಬುದ್ಧಿಮಾತನ್ನು ಲಕ್ಷ$್ಯವಿಟ್ಟು ಕೇಳಿ ಉತ್ತಮ ವ್ಯಕ್ತಿಗಳಾಗಿ ಎಂದರು.
ಬಿಜೆಪಿ ಮುಖಂಡ ಹುಲ್ಲಳ್ಳಿ ಶ್ರೀನಿವಾಸ್​ ಮಾತನಾಡಿ, ಸಮಾಜದ ಅಭಿವೃದ್ಧಿ ಹಾಗೂ ರಾಷ್ಟ್ರದ ಉಜ್ವಲ ಭವಿಷ್ಯ ನಿಮಾರ್ಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಕೇವಲ ಪಾಠ ಮಾಡುವವರಲ್ಲ, ಉತ್ತಮ ಸಂಸ್ಕಾರ, ಶಿಸ್ತು, ನೈತಿಕ ಮೌಲ್ಯಗಳು ಮತ್ತು ಜೀವನ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಾರ್ಗದರ್ಶಕರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್​ ಮುಖಂಡ ಕೆ.ಪಿ.ರಾಜು, ಬಿಜೆಪಿ ಮುಖಂಡ ಹೀಲಲಿಗೆ ಕೃಷ್ಣಾರೆಡ್ಡಿ, ಜಿಲ್ಲಾ ಕಾರ್ಯದರ್ಶಿ ನಾಗನಾಯಕನಹಳ್ಳಿ ರಾಧಾಕೃಷ್ಣ, ಮರಿಯಣ್ಣ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಚಂದ್ರಶೇಖರ್​, ಆನೇಕಲ್​ ತಾಲೂಕು ಅಧ್ಯಕ್ಷ ಗೋವಿಂದರಾಜು, ಕಸಾಪ ಆನೇಕಲ್​ ತಾಲೂಕು ಅಧ್ಯಕ್ಷ ಆದೂರು ಪ್ರಕಾಶ್​, ಟ್ರಸ್ಟ್​ ಅಧ್ಯಕ್ಷ ಶೆಟ್ಟಹಳ್ಳಿ ವಿನಯ್​ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಆರಾಧ್ಯ, ನಿರ್ದೇಶಕರಾದ ಶ್ರೀನಿವಾಸ್​ ರೆಡ್ಡಿ, ತಿರಮಲೇಶ್​ ಗೌಡ, ಚಂದ್ರಪ್ಪ, ಮಾದೇಶ್​, ಕುಪೇಂದ್ರ ಗೌಡ ಇತರರು ಇದ್ದರು.
ಶಿಕ್ಷಕರೆಂದರೆ ದುಡಿಯುವ ಯಂತ್ರಗಳೇ? : ಶಿಕ್ಷಕರಿಗೆ ಪಾಠ ಮಾಡಲು ಬಿಡಬೇಕು, ಪಾಠವನ್ನು ಹೊರತುಪಡಿಸಿ ಎಲ್ಲ ರೀತಿಯ ಕೆಲಸಗಳನ್ನು ಕೊಡಲಾಗುತ್ತಿದೆ. ಇದರಿಂದ ಗುಣಮಟ್ಟದ ಶಿಕ್ಷಣ ಕೊಡಲು ಶಿಕ್ಷಕರಿಗೆ ಸಾಧ್ಯ ಆಗುವುದಿಲ್ಲ. ಸರ್ಕಾರಿ ಶಾಲೆಯ ಶಿಕ್ಷಕರೆಂದರೆ ದುಡಿಯುವ ಯಂತ್ರದಂತೆ ಆಗಿದೆ ಎಂದು ಹಲವಾರು ಶಿಕ್ಷಕರು ಅಳಲು ತೋಡಿಕೊಂಡರು.

ಆನೇಕಲ್​ ತಾಲೂಕು ಗಡಿ ಭಾಗದಲ್ಲಿದೆ. ಈ ಭಾಗದಲ್ಲಿ ಶಿಕ್ಷಕರು ನಮ್ಮ ಭಾಷೆ ಹಾಗೂ ಸರ್ಕಾರಿ ಶಾಲೆಗಳ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಶಿಕ್ಷಕರ ಕೆಲಸಗಳನ್ನು ಗುರುತಿಸುವ ಕೆಲಸವನ್ನು ಆನೇಕಲ್​ ಚಂದನ ಸೇವಾ ಟ್ರಸ್ಟ್​ ಮಾಡಿದೆ.

— > ಆದೂರು ಪ್ರಕಾಶ್​ ಕಸಾಪ ತಾಲೂಕು ಅಧ್ಯಕ್ಷ.