ಆಳಂದ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನ್ಯಾಯಾಧೀಶ ವಿಜಯಕುಮಾರ ಎಸ್.ಜೆಟ್ಲಾ ಮಾತನಾಡಿದರು. ಸುಮನಾ ಚಿತ್ತರಗಿ, ಪ್ರವಿಣಕುಮಾರ್ ಇತರರಿದ್ದರು.
- ನ್ಯಾಯಾಧೀಶ ವಿಜಯಕುಮಾರ ಜೆಟ್ಲಾ ತಾಕೀತು
- ಆಳಂದನಲ್ಲಿ ಲೋಕ ಅದಾಲತ್ ಪೂರ್ವಭಾವಿ ಸಭೆ
ಆಳಂದ: ಪಟ್ಟಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ, ಟ್ರಾಫಿಕ್ ಸಮಸ್ಯೆ ಮಿತಿ ಮೀರಿದೆ. ನಾನೇ ಕೋರ್ಟ್ಗೆ ಬರಬೇಕಾದರೆ ಒಂದು ಗಂಟೆ ಸಮಯ ತೆಗೆದುಕೊಂಡಿದೆ. ಸ್ಥಳಿಯ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂದ?ು ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ವಿಜಯಕುಮಾರ ಎಸ್. ಜೆಟ್ಲಾ ಕಿಡಿಕಾರಿದರು.
ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಸೆ.12ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಸ್ತೆ ಅಗಲೀಕರಣ ನೆಪದಲ್ಲಿ ಸ್ವಚ್ಛತೆ ಕುಂಠಿತಗೊಂಡಿದೆ. ನ್ಯಾಯಾಲಯದ ಸುತ್ತಲೂ ಮಲೀನ ವಾತಾವರಣ ನಿರ್ಮಾಣವಾಗಿದೆ. ದಿನೇ-ದಿನೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ಏಕೆ ? ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳು ದೂರವಾಗಬೇಕು ಎಂದು ತಾಕೀತು ಮಾಡಿದರು.
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಬಾಕಿ ಇರುವ ಬ್ಯಾಂಕ್ ವಸೂಲಾತಿ, ಮೋಟಾರ್ ಅಪಘಾತ ಪರಿಹಾರ, ವಿದ್ಯುತ್ ಹಾಗೂ ನೀರಿನ ಶುಲ್ಕ, ಭೂ ಸ್ವಾಧಿನ, ರಾಜಿ ಆಗಬಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಮನಾ ಚಿತ್ತರಗಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪ್ರವಿಣಕುಮಾರ, ಸಹಾಯಕ ಸರ್ಕಾರಿ ಅಭಿಯೋಜಕರಾದ ಇಸ್ಮಾಯಿಲ್ ಪಟೇಲ್, ಜ್ಯೋತಿ ವಿ. ಬಂದಿ, ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯಕ್ಷ ಕಮಲಾಕರ ರಾಠೋಡ್, ಗ್ರೇಡ್-2 ತಹಸೀಲ್ದಾರ್ ಮಲ್ಲಿಕಾರ್ಜುನ ಪಾಟೀಲ್, ಪಿಎಸ್ಐ ಸಂಜಯ ರೆಡ್ಡಿ, ಸಾರಿಗೆ ಘಟಕದ ವ್ಯವಸ್ಥಾಪಕ ಯೋಗೇಶ ಸರಸಂಬಿ ಇತರರಿದ್ದರು.