ಕೇಂದ್ರ ಸಚಿವ ಪ್ರಲ್ಹಾದ ಜೋಶಿ 
ರಾಜ್ಯ

ವಿಕಸಿತ ಭಾರತ ಆಧಾರದಲ್ಲಿ ಬಜೆಟ್ ಮಂಡನೆ - developed India

ಬೆಂಗಳೂರು: ನವೀಕರಿಸಬಹುದಾದ ಶಕ್ತಿ ಹಾಗೂ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಭಾರತ 3ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
2026ರ ಕೇಂದ್ರ ಬಜೆಟ್ ಮಂಡಿಸಿದ ಬಳಿಕ ಪೀಣ್ಯ ಕೈಗಾರಿಕಾ ಸಂಘ, ಪೀಣ್ಯ ದಾಸರಹಳ್ಳಿಯ ಪಿಐಎ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಕೈಗಾರಿಕಾ ಸದಸ್ಯರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.
2047ಕ್ಕೆ ವಿಕಸಿತ ಭಾರತದ ಆಶಯ ಇಟ್ಟುಕೊಂಡು ಬಜೆಟ್ ನೀಡಲಾಗಿದೆ. ಏರ್‌ಪೋರ್ಸ್ ಮತ್ತು ಏರ್‌ಕ್ರಾಫ್ಟ್​​​ಗೆ ಒತ್ತು ನೀಡಲಾಗಿದೆ. ದೇಶದ 3 ಕಡೆ ದೊಡ್ಡ ಕೆಮಿಕಲ್ ಪಾರ್ಕ್ ಮಾಡಲಾಗುತ್ತಿದೆ. ಕೌಶಲಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಆರು ಪಟ್ಟು ಜಾಸ್ತಿಯಾಗಿದೆ. ಜಗತ್ತಿಗೆ ಬೇಕಿರುವ ಬೇಡಿಕೆ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಬೇಕು. ಹೆಚ್ಚು ಉತ್ಪಾದನೆ ದೇಶದಲ್ಲಿಯೇ ಆಗಬೇಕು. ಜೊತೆಗೆ, ವಿದೇಶಗಳಿಗೆ ಹೆಚ್ಚು ರಫ್ತು ಆಗಬೇಕು. ಆತ್ಮನಿರ್ಭರತೆ ಮೂಲಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗಿದೆ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ನಮ್ಮ ಕೈಗಾರಿಕೆಗಳ ಮುಂದಿನ ಭವಿಷ್ಯ ಎಐ ಮತ್ತು ರೋಬಾಟ್ ಟೆಕ್ನಾಲಜಿಯಲ್ಲಿ ಇರಲಿದೆ. ದೇಶದ 4 ಕಡೆಗಳಲ್ಲಿ ಹೊಸದಾಗಿ ಇಎಸ್‌ಐ ಅಸ್ಪತ್ರೆ ಅರಂಭವಾಗಲಿದೆ. ಕೈಗಾರಿಕೆಗಳ ಎದುರಿಸುತ್ತಿರುವ ಜಿಎಸ್‌ಟಿ ಸೇರಿ ಮುಂತಾದ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆ ಅಡಿ ಪ್ರಧಾನಿ ನರೇಂದ್ರ ಮೋದಿ ಅವರು, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಶಾಸಕ ಎಸ್.ಮುನಿರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಘದ ಅಧ್ಯಕ್ಷ ಡಿ.ಪಿ. ದಾನಪ್ಪ, ಹಿರಿಯ ಉಪಾಧ್ಯಕ್ಷ ಡಿ.ಎಚ್. ಪಾಟೀಲ್, ಉಪಾಧ್ಯಕ್ಷ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಬಿ. ತಿಮ್ಮಯ್ಯ, ಖಜಾಂಚಿ ಎ.ಪಿ, ಸೆಲ್ವಕುಮಾರ್ ಇತರರಿದ್ದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಗೊಂದಲದ ಮಧ್ಯೆ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದ ಹಲವೆಡೆ ಅನೇಕ ಸಮಸ್ಯೆಗಳಿವೆ. ಉತ್ತರ ಕರ್ನಾಟಕದಲ್ಲಿ ನೀರು ಮತ್ತು ರಸ್ತೆ ಸಮಸ್ಯೆ ಜಾಸ್ತಿ ಇದೆ.
- ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ