ರಾಜ್ಯ

ಬುದ್ಧನ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಇಂದಿನ ಜಗತ್ತಿಗೆ ಅತ್ಯಗತ್ಯ - ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ವಿಶ್ವವ್ಯಾಪಿ ಬುದ್ಧನ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಇಂದಿನ ಸಂಘರ್ಷಮಯ ಜಗತ್ತಿಗೆ ಅತ್ಯಗತ್ಯವಾಗಿವೆ. ಬುದ್ಧನ ಜ್ಞಾನೋದಯದ ಕಿರಣಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಇಡೀ ಮಾನವಕುಲಕ್ಕೆ ಬೆಳಕಾಗಿವೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಪ್ರತಿಪಾದಿಸಿದರು.
ನಗರದ ಜಗತ್ ವೃತ್ತದ ಬಳಿಯ ಲುಂಬಿನಿ ಉದ್ಯಾನವನದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಬುದ್ಧ ಜಯಂತ್ಯೋತ್ಸವ'ದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೋಷಿತರ ಪರವಾಗಿ ಹೋರಾಡುತ್ತಾ, ಅಂತಿಮವಾಗಿ ಬುದ್ಧನ ವೈಜ್ಞಾನಿಕ ಮತ್ತು ಮಾನವೀಯ ತತ್ವಗಳಿಂದ ಪ್ರಭಾವಿತರಾದರು. 1956ರಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಸಮಾನತೆಯ ಹೊಸ ಯುಗವನ್ನು ಆರಂಭಿಸಿದರು. ಬುದ್ಧನ ಜನನ, ಜ್ಞಾನೋದಯ ಹಾಗೂ ಮಹಾಪರಿನಿರ್ವಾಣ ಈ ಮೂರೂ ಘಟನೆಗಳು ಒಂದೇ ದಿನ ಅಂದರೆ ವೈಶಾಖ ಪೂರ್ಣಿಮೆಯಂದೇ ಸಂಭವಿಸಿರುವುದು ವಿಶ್ವ ಇತಿಹಾಸದ ಅಪರೂಪದ ವಿದ್ಯಮಾನ. ಅಶೋಕ ಚಕ್ರವರ್ತಿಯ ಕಾಲದಿಂದ ಹರಡುತ್ತಾ ಬಂದ ಈ ಧರ್ಮದ ಹಾದಿಯಲ್ಲಿ ಇಂದಿನ ಯುವ ಪೀಳಿಗೆ ಸಾಗಬೇಕು ಎಂದು ಕರೆ ನೀಡಿದರು.
ತತ್ವಗಳ ಪಾಲನೆ ಅಗತ್ಯ:
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು, ಬುದ್ಧ, ಬಸವ ಮತ್ತು ಅಂಬೇಡ್ಕರ್ ಈ ಮೂವರೂ ಮಹಾಪುರುಷರ ಆಶಯ ಒಂದೇ ಆಗಿತ್ತು. ಶಾಂತಿ, ಕರುಣೆ ಮತ್ತು ಸತ್ಯದ ಮಾರ್ಗವನ್ನು ಗೌತಮ ಬುದ್ಧ ತೋರಿಸಿಕೊಟ್ಟರೆ, ಸಂವಿಧಾನದ ಮೂಲಕ ಗೌರವಯುತವಾಗಿ ಬದುಕುವುದು ಹೇಗೆಂಬುದನ್ನು ಅಂಬೇಡ್ಕರ್ ಕಲಿಸಿಕೊಟ್ಟಿದ್ದಾರೆ. ಇವರ ತತ್ವಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ವಿಶೇಷ ಉಪನ್ಯಾಸ:
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅವರು ವಿಶೇಷ ಉಪನ್ಯಾಸ ನೀಡಿ, "ಬಸವಣ್ಣನವರ ಅನುಭವ ಮಂಟಪಕ್ಕಿಂತಲೂ 2500 ವರ್ಷಗಳ ಹಿಂದೆಯೇ ಬುದ್ಧ ಸಮಾನತೆಯ ಸಂಘಟನೆಯನ್ನು ರೂಪಿಸಿದ್ದರು. ಅಂಬೇಡ್ಕರ್ ಅವರು 1935ರಲ್ಲಿ ಮಾಡಿದ ಪ್ರತಿಜ್ಞೆಯಂತೆ ಬೌದ್ಧ ಧರ್ಮ ಸ್ವೀಕರಿಸಿ ಭಾರತಕ್ಕೆ ಪ್ರಬುದ್ಧ ಪ್ರಜ್ಞೆಯನ್ನು ನೀಡಿದರು ಎಂದು ವಿವರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ  ಜಗದೀಶ್ವರಿ.ಅ. ನಾಸಿ ಸ್ವಾಗತಿಸಿದ್ದರು. ಭಂತೆ ಧಮ್ಮ ಜ್ಯೋತಿ ಬುದ್ದ ವಂದನೆ ಸಲ್ಲಿಸಿದರು.  ಸಿದ್ದಾರ್ಥ  ಚಿಮ್ಮಾ ಇದ್ಲಾಯಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.  
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್ ಬುದ್ದ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ , ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ,ಕರ್ನಾಟಕ ರಾಜ್ಯ ಸರ್ಕಾರಿ-ಅರೆ ಸರ್ಕಾರಿ ಎಸ್.ಸಿ-ಎಸ್.ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಹೇಶ ಹುಬಳ್ಳಿ, ಸಮಾಜದ ಮುಖಂಡರ ಎ.ಬಿ. ಹೊಸಮನೆ. ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು. 
ಪ್ರತಿಮೆಗೆ ಗೌರವ ನಮನ ಸಲ್ಲಿಕೆ:-
ಬುದ್ದ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ , ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ,ಕರ್ನಾಟಕ ರಾಜ್ಯ ಸರ್ಕಾರಿ-ಅರೆ ಸರ್ಕಾರಿ ಎಸ್.ಸಿ-ಎಸ್.ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಹೇಶ ಹುಬಳ್ಳಿ, ಸಮಾಜದ ಮುಖಂಡ ಎ.ಬಿ. ಹೊಸಮನೆ. ಸೇರಿದಂತೆ ಬುದ್ಧನ ಪ್ರತಿಮೆಗೆ ಮೇಣದ ಬತ್ತಿ ಬೆಳಗುವ ಮೂಲಕ ಗೌತಮ ಬುದ್ಧಗೆ ಗೌರವ ನಮನ ಸಲ್ಲಿಸಿದರು.