ಚಿಟಗುಪ್ಪ ತಾಲೂಕಿನ ರೇಕುಳಗಿ ಮೌಂಟ್ನ ಅನಾಥಪಿಂಡಕ ಬುದ್ಧ ವಿಹಾರದಲ್ಲಿ ಶುಕ್ರವಾರ ಬುದ್ಧ ಪೂರ್ಣಿಮೆ ನಿಮಿತ್ತ ಬುದ್ಧ ಜಯಂತಿ ಆಚರಿಸಲಾಯಿತು. ವಿಹಾರದ ಭಿಕ್ಕು ರೇವತ್, ಭಿಕ್ಕು ಧರ್ಮಪಾಲ, ಭಿಕ್ಕುಣಿ ಮಹಾ ಪ್ರಜಾಪತಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪುಂಡಲಿಕರಾವ, ಪ್ರಮುಖರಾದ ಪ್ರೇಮಸಾಗರ ದಂಡೇಕರ, ಶಿವಮೂರ್ತಿ ಸುಭಾನೆ ಇತರರಿದ್ದರು.
ಚಿಟಗುಪ್ಪ: ಮನ್ನಾಎಖೇಳ್ಳಿ ಸಮೀಪದ ರೇಕುಳಗಿ ಮೌಂಟ್ ಮೇಲಿರುವ ಅನಾಥಪಿಂಡಕ ಬುದ್ಧ ವಿಹಾರದಲ್ಲಿ ಶುಕ್ರವಾರ 2570ನೇ ವೈಶಾಖ ಬುದ್ಧ ಪೂರ್ಣಿಮೆ ನಿಮಿತ್ತ ಬುದ್ಧ ಜಯಂತಿ ಭಕ್ತಿಪೂರ್ವಕವಾಗಿ ಹಾಗೂ ವೈಭವದಿಂದ ಆಚರಿಸಲಾಯಿತು.
ಬೆಳಗ್ಗೆ ಭಿಕ್ಕು ಸಂದವರಿಂದ ಬುದ್ಧ ವಂದನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ ಆರಂಭಗೊಂಡಿತ್ತು. ನಂತರ ಧಮ್ಮ ಧ್ವಜಾರೋಹಣ, ಬೌದ್ಧ ಭಿಕ್ಕುಗಳ ನೇತೃತ್ವದಲ್ಲಿ ಸಾಮೂಹಿಕ ಬುದ್ಧ ವಂದನೆ ಹಾಗೂ ಧಮ್ಮ ಪ್ರವಚನ ನಡೆಯಿತು.
ವಿಹಾರದ ಭಿಕ್ಕು ರೇವತ್, ಭಿಕ್ಕು ಧರ್ಮಪಾಲ ಹಾಗೂ ಭಿಕ್ಕುಣಿ ಮಹಾ ಪ್ರಜಾಪತಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬೌದ್ಧ ಧರ್ಮದ ಮಹತ್ವ ವಿವರಿಸಿದರು. ಗೌತಮ ಬುದ್ಧರ ಜೀವನದ ಆದರ್ಶಗಳು, ಅಹಿಂಸೆ, ಶಾಂತಿ, ಸಮಾನತೆ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇಂದಿನ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಬುದ್ಧನ ಸಂದೇಶಗಳು ಅಗತ್ಯವೆಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪುಂಡಲಿಕರಾವ, ಪ್ರಮುಖರಾದ ಪ್ರೇಮಸಾಗರ ದಂಡೇಕರ, ಶಿವಮೂರ್ತಿ ಸುಭಾನೆ, ಸಚಿನ ಕೌಟೆ, ಚಕ್ರಧಾರ ಜೂಟಿ, ಅಶೋಕ ಅಂಬಲಗಿ ಕಲಬುರಗಿ, ಅನೀಲ ಟೆಂಗಳಿಕಲಬುರಗಿ, ವೈಜೀನಾಥ ವಡ್ಡೆ ಹೈರಾಬಾದ್ ಸೇರಿ ಜಿಲ್ಲೆಯ ವಿವಿಧಡೆಯಿಂದ ಅಪಾರ ಸಂಖ್ಯೆಯ ಬೌದ್ಧ ಉಪಾಸಕರು ಹಾಗೂ ಉಪಾಸಕಿಯರು ಭಾಗವಹಿಸಿ, ಭಕ್ತಿ ಭಾವದಿಂದ ಬುದ್ಧ ವಂದನೆ ಸಲ್ಲಿಸಿದರು.