ಬಿಎಸ್​ವೈ ರಾಜಕೀಯ ಜೀವನದ 50ರ ಸಂಭ್ರಮ: ಮನೆಗೆ ಆಗಮಿಸಿ ಶುಭಕೋರಿದ ಬಿ.ಎಲ್. ಸಂತೋಷ್ 
ರಾಜ್ಯ

ಬಿಎಸ್​ವೈ ರಾಜಕೀಯ ಜೀವನದ 50ರ ಸಂಭ್ರಮ: ಮನೆಗೆ ಆಗಮಿಸಿ ಶುಭಕೋರಿದ ಬಿ.ಎಲ್. ಸಂತೋಷ್ | B.S Yediyurappa

ಬೆಂಗಳೂರು: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಶನಿವಾರ (ಮೇ.2) ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(B.S Yediyurappa) ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಯಡಿಯೂರಪ್ಪ ಅವರು, ಬಿ.ಎಲ್. ಸಂತೋಷ್ ಅವರ ಸಂಘಟನಾ ಸಾಮರ್ಥ್ಯ ಮತ್ತು ಚತುರತೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸ್ಫೂರ್ತಿಯ ಸೆಲೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಸೌಹಾರ್ದಯುತ ಭೇಟಿ ಮತ್ತು ಉಪಹಾರ

ಶನಿವಾರ ಬೆಳಿಗ್ಗೆ ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿದ ಬಿ.ಎಲ್. ಸಂತೋಷ್ ಅವರನ್ನು ಬಿಎಸ್‌ವೈ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಉಭಯ ನಾಯಕರು ಜೊತೆಯಾಗಿ ಉಪಹಾರ ಸೇವಿಸಿ, ರಾಜಕೀಯ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಪಂಚರಾಜ್ಯ ಚುನಾವಣೆಯ ಬಗ್ಗೆ ಚರ್ಚೆ
ಮುಂಬರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಕುರಿತು ಈ ಭೇಟಿಯ ವೇಳೆ ಮಹತ್ವದ ಸಮಾಲೋಚನೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯು 5 ರಾಜ್ಯಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂಬ ದೃಢ ವಿಶ್ವಾಸವನ್ನು ಬಿ.ಎಲ್. ಸಂತೋಷ್ ವ್ಯಕ್ತಪಡಿಸಿದರು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಬಿಎಸ್‌ವೈ 50 ವರ್ಷಗಳ ರಾಜಕೀಯ ಪಯಣಕ್ಕೆ ಅಭಿನಂದನೆ

ಇದೇ ಸಂದರ್ಭದಲ್ಲಿ, ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಯಶಸ್ವಿ ರಾಜಕೀಯ ಜೀವನದ ಸಾಧನೆಯನ್ನು ಸ್ಮರಿಸಿದ ಸಂತೋಷ್ ಅವರು ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ರಾಜ್ಯ ರಾಜಕಾರಣದ ದೃಷ್ಟಿಯಿಂದ ಈ ಹಿರಿಯ ಇಬ್ಬರು ನಾಯಕರ ಭೇಟಿ ಅತ್ಯಂತ ಮಹತ್ವದ್ದೆಂದು ವಿಶ್ಲೇಷಿಸಲಾಗುತ್ತಿದೆ.