- ಹಳೆಯ ಆರ್‌ಟಿಓ ರಸ್ತೆಯಲ್ಲಿ ಘಟನೆ
- ಹಳೆಯ ಕೊಲೆ ಪ್ರಕರಣದ ವೈಷಮ್ಯ ಶಂಕೆ
ಕಲಬುರಗಿ: ನಗರದ ಹಳೆ ಆರ್‌ಟಿಓ ರಸ್ತೆಯ ವೈನ್‌ಶಾಪ್‌ವೊಂದರ ಮುಂಭಾಗ ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ನಗರದ ಆದರ್ಶ ನಗರದ ನಿವಾಸಿ ರವಿ ಗುತ್ತೆದಾರ್ (46) ಕೊಲೆಯಾದ ವ್ಯಕ್ತಿ. ಟೀ ಪಾಯಿಂಟ್ ಹಾಗೂ ಸಭೆ-ಸಮಾರಂಭಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ರವಿ, ಭಾನುವಾರ ರಾತ್ರಿ ಮದ್ಯ ಖರೀದಿಸಲು ಹಳೆ ಆರ್‌ಟಿಓ ರಸ್ತೆಯ ವೈನ್‌ಶಾಪ್‌ಗೆ ತೆರಳಿದ್ದರು.
ಮದ್ಯ ಖರೀದಿಸಿ ಹೊರಬಂದು ತನ್ನ ವಾಹನದ ಮೇಲೆ ಕುಳಿತುಕೊಳ್ಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಏಕಾಏಕಿ ರವಿ ಮೇಲೆ ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆಯ ಕೊಲೆ ಪ್ರಕರಣದ ವೈಷಮ್ಯ?
ರವಿ ಗುತ್ತೆದಾರ್ 2021ರಲ್ಲಿ ರೋಜಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ. ಹಳೆಯ ಕೊಲೆ ಪ್ರಕರಣದ ವೈಷಮ್ಯವೇ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.