ಬೆಂಗಳೂರು: ಸುಗಮ ಸಂಗೀತ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಪ್ರಮುಖ ವ್ಯಕ್ತಿ ಬಿ.ಆರ್.ಲಕ್ಷ್ಮಣರಾವ್. ಕಾವ್ಯ ಗಾಯನ ಗಟ್ಟಿಗೊಳಿಸುವ ಮೂಲಕ ಆ ಕ್ಷೇತ್ರಕ್ಕೆ ದೊಡ್ಡ ಆಯಾಮ ತಂದುಕೊಟ್ಟವರು ಎಂದು ಚಿತ್ರ ನಿರ್ದೇಶಕ ಮತ್ತು ರಂಗಕರ್ಮಿ ಟಿ.ಎಸ್.ನಾಗಾಭರಣ ಬಣ್ಣಿಸಿದ್ದಾರೆ.
ಅಂಕಿತ ಪುಸ್ತಕ, ಭಾನುವಾರ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಬಿ.ಆರ್. ಲಕ್ಷ್ಮಣ್‌ರಾವ್ ರಚನೆಯ ‘ಅದೃಷ್ಟವಂತನ ಆತ್ಮಕಥೆ’ ಆತ್ಮಕಥನ ಹಾಗೂ ‘ಹಕ್ಕೆಗೆ ಬಂದ ಹಕ್ಕಿ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಅಂದಿನಿಂದ ಇಂದಿನವರೆಗೂ ಬಿಆರ್‌ಎಲ್, ಲಕ್ಕಿ ಲಕ್ಷ್ಮಣ ಎಂದು ಸಾಕ್ಷೀಕರಿಸಿ ಬಂದಿದ್ದಾರೆ. ಅವರ ಆತ್ಮಕಥೆಗೆ ತನ್ನದೆಯಾದ ಮೌಲ್ಯ ಇದೆ. ಅವರ ಆತ್ಮಕಥೆಯ ಪುಸ್ತಕದಲ್ಲಿ ಕನ್ನಡದ ಸಾರಸತ್ವ ಲೋಕ ಮತ್ತು ಸುಗಮ ಸಂಗೀತ ಕ್ಷೇತ್ರದ ಇತಿಹಾಸ ಇದೆ ಎಂದರು.
ಅಂದಿನ ಕಾಲಘಟ್ಟದಲ್ಲಿ ಆ ಕ್ಷೇತ್ರದ ಹುಟ್ಟು, ತಿರುವು ಸೇರಿ ಇತರ ಮಹತ್ವದ ಸಂಗತಿಗಳಿವೆ. ಹಿಂದಿನ ಕಾಲಘಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ನಮಗೆ ಗೊತ್ತಿಲ್ಲದ ಹಲವು ಸಂಗತಿಗಳಿವೆ. ನಿನ್ನೆಯ ಬಗ್ಗೆ ಇದ್ದಂತಹ ಪ್ರೀತಿ, ವಿಶ್ವಾಸ ನಾಳೆಗೆ ಕರೆದುಕೊಂಡು ಹೋಗುತ್ತದೆ.ಬರಹಗಾರ, ಕವಿ ಮುಖ ಬದಲು ಅವರಲ್ಲಿ ಸಹೃದಯ ಮುಖ ಇದೆ. ನನ್ನ ಬದುಕಿನಲ್ಲಿ ಬಿಆರ್‌ಎಲ್ ಜತೆ ಅವಿನಾಭಾವ ಸಂಬಂಧ ಇದೆ. ಅವರ ಬದುಕಿನ ಕಾವ್ಯದಲ್ಲಿ ಸಣ್ಣ ಭಾಗವಾಗಿದ್ದೇನೆ ಎಂದು ನಟಿ.ಎಸ್. ನಾಗಾಭರಣ ಹೇಳಿದರು. ಹಿರಿಯ ಪತ್ರಕರ್ತ ಜೋಗಿ ಸೇರಿ ಮತ್ತಿತರರಿದ್ದರು.
ಸಾಧಕ-ಬಾಧಕ ಓದುಗರಿಗೆ ಬಿಟ್ಟಿದ್ದೇನೆ:
ಕೆಲವರ ಒತ್ತಾಯದ ಮೇರೆಗೆ ಆತ್ಮಕಥೆ ಪುಸಕ್ತ ಬರೆದಿದ್ದೇನೆ.ಇದರ ಸಾಧಕ-ಬಾಧಕ ಬಗ್ಗೆ ಓದುಗರಿಗೆ ಬಿಟ್ಟಿದ್ದೇನೆ. ನನ್ನ ಬಗ್ಗೆ ಎಲ್ಲರೂ ಪ್ರಶಂಸನೀಯ ಮಾತುಗಳನ್ನಾಡಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಸಿನಿಮಾ, ನಾಟಕ ಕ್ಷೇತ್ರಕ್ಕೆ ನನ್ನನ್ನು ಎಳೆದುಕೊಂಡು ಬಂದವರು ಟಿ.ಎಸ್. ನಾಗಾಭರಣ. ಭಾವಗೀತೆ, ಕವಿತೆಗಳನ್ನು ಮೆಚ್ಚಿಕೊಂಡಿರುವವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ನಿಜವಾದ ಆತ್ಮಕಥೆ ಕವಿತೆಗಳಲ್ಲಿ ಬಂದಿದೆ. ಪುಸ್ತಕ ಖರೀದಿಸಿ ಓದಬೇಕು ಎಂದು ಪ್ರಸಿದ್ಧ ಪ್ರೇಮಕವಿ ಬಿ.ಆರ್.ಲಕ್ಷ್ಮಣರಾವ್, ಓದುಗರಿಗೆ ಮನವಿ ಮಾಡಿದರು.
ಬಿ.ಆರ್.ಲಕ್ಷ್ಮಣರಾವ್ ಅವರ ಕವಿತೆಗಳು ಒದಕ್ಕೊಂದು ಅದ್ಭುತವಾಗಿವೆ.ಮೊದಲು ಓದುವ ಪರಂಪರೆಕ್ಕಿಂತ ಕೇಳುವ ಪರಂಪರೆ ಇತ್ತು. ಅಂದಿನ ಕಾಲಘಟ್ಟದಲ್ಲಿ ಬಿಆರ್‌ಎಲ್ ಅವರಿಂದ ಓದುವ ಪರಂಪರೆ ಬಂದಿತು. ಅವರ ಗೀತೆಗಳನ್ನು ಓದಿ ನಾವು ಅಭಿಮಾನಿಯಾಗಿದ್ದೇವೆ.