ಕಾರ್ಯಕ್ರಮಕ್ಕೆ ರೈತ ಹೆಣ್ಣು ಮಕ್ಕಳನ್ನು ಕರೆತನ್ನಿ farmer 
ರಾಜ್ಯ

ಕಾರ್ಯಕ್ರಮಕ್ಕೆ ರೈತ ಹೆಣ್ಣು ಮಕ್ಕಳನ್ನು ಕರೆತನ್ನಿ farmer

ಪ್ರಮುಖ ಮುಖ್ಯಾಂಶಗಳು

  • ರೈತ ಬೆಳೆದ ಬೆಳೆಗೆ ಮಾರುಕಟ್ಟೆಯೇ ಇಲ್ಲ
ತೂಬಗೆರೆ: ರೈತ ದಿನಾಚರಣೆಯಲ್ಲಿ ರೈತ ಹೆಣ್ಣು ಮಕ್ಕಳೇ ಇಲ್ಲ. ರೈತರ ಬಗ್ಗೆ ತಿಳಿವಳಿಕೆ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿ ಅಧಿಕಾರಿಗಳು ಮನೆಮನೆಗೂ ಹೋಗಿ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬನ್ನಿ ಎಂದು ರಾಜ್ಯ ಮಹಿಳಾ ಆಯೋಗದ ಡಾ.ನಾಗಲಕ್ಷ್ಮೀ ಚೌದರಿ ಬುದ್ದಿ ಹೇಳಿದರು. farmer
ದೊಡ್ಡಬಳ್ಳಾಪುರ ತಾಲೂಕು ಮೇಳೆಕೋಟೆ ಸಮುದಾಯ ಭವನದಲ್ಲಿ ಸ್ಪೂರ್ತಿ ಕನ್ನಡ ಕಲಾ ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಮಾತನಾಡಿದ ಅವರು, ರೈತ ಹೆಣ್ಣು ಮಕ್ಕಳಿಲ್ಲದೆ ಹೀಗೆ ಕಾರ್ಯಕ್ರಮ ನಡೆಸಿದರೆ ರೈತರಿಗೆ ಏನು ತಿಳಿಯುತ್ತದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರೈತರು ದೇಶದ ಬೆನ್ನೆಲುಬು. ಅವರನ್ನು ಕೀಳಾಗಿ ನೋಡಬಾರದು. ರೈತ ಬೆಳೆದ ಬೆಳೆಗೆ ಮಾರುಕಟ್ಟೆಯೇ ಇಲ್ಲದಂತಾಗಿದೆ. ಹೆಣ್ಣು ಮಕ್ಕಳ ಹೆಸರಿಗೆ ಯಾರು ಯಾರು ಆಸ್ತಿ ನೋಂದಣಿ ಮಾಡುತ್ತಾರೋ ಅಂತವರಿಗೆ ಹಣ ಕಡಿಮೆ ಮಾಡಿ ಎಂದು ಸಚಿವ ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದಿದ್ದೇನೆ ಎಂದರು.
ಪಿಡಿಒ ಬಗ್ಗೆ ದೂರು: ಮೇಳೆಕೋಟೆಯಲ್ಲಿ ಹಲವು ದಿನಗಳಿಂದ ಖಾತೆ ಮಾಡುತ್ತಿಲ್ಲ. ಕುಡಿಯುವ ನೀರು, ಚರಂಡಿ ವ್ಯವಸ್ಥೆ ಇಲ್ಲ. ಕೆಲವು ಕಡೆಗಳಲ್ಲಿ ದಾರಿಗಳೇ ಇಲ್ಲವಾದರೂ ಪಿಡಿಒ ಗಂಗಬೇರೇಗೌಡ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮೇಳೆಕೋಟೆ ಗ್ರಾಪಂನಲ್ಲಿ ಮೂಲ ಸೌಕರ್ಯಗಳೇ ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ನಾಗಲಕ್ಷ್ಮೀ ಚೌದರಿ, ಪಿಡಿಒ ಎಲ್ಲ ಗ್ರಾಮಗಳಿಗೆ ತೆರಳಿ ಸರ್ಕಾರದ ನಿಯಮಗಳು ಏನೇ ಇದ್ದರೂ ಮಾಡಿಕೊಡಬೇಕು. ಇಲ್ಲವಾದಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೇಳೆಕೋಟೆ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಚುಟುಕು ಸಾಹಿತ್ಯ ಪರಿಷತ್​ ಸಂಪಾದಕ ಎಂ.ಜಿ.ಆರ್​.ಅರಸ್​, ಚಿತ್ರ ನಟ ಸುನೀಲ್​ ಶಶಿಧರ್​, ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ರತ್ನ ಹಾಲಪ್ಪಗೌಡ ಇತರರಿದ್ದರು.