ಮುದ್ದೇಬಿಹಾಳ ಪಟ್ಟಣದ ಬಿಬಿಆರ್ ಹಾರ್ವರ್ಡ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಯಣ್ಣ ಜಾತ್ರೆಯ ಪೂರ್ವ ಸಭೆಯಲ್ಲಿ ಹುಲಜಂತಿ ಶ್ರೀ ಮಾತನಾಡಿದರು. ಮೋಹನ ಮೇಟಿ, ಪ್ರಕಾಶ ಜಾಲಗೇರಿ, ಎಸ್.ಎಂ. ನೆರಬೆಂಚಿ ಮತ್ತಿತರರಿದ್ದರು. 
ರಾಜ್ಯ

ರಾಯಣ್ಣ ಜಾತ್ರೆಗೆ ಎಲ್ಲರನ್ನು ಕರೆ ತನ್ನಿ

ಪ್ರಮುಖ ಮುಖ್ಯಾಂಶಗಳು

  • ಹುಲಜಂತಿ ಶ್ರೀ ಸಲಹೆ
  • ಪೂರ್ವಭಾವಿ ಸಭೆ

ಮುದ್ದೇಬಿಹಾಳ: ಕಿತ್ತೂರ ರಾಣಿ ಚನ್ನಮ್ಮನ ನಿಷ್ಠಾವಂತ ಸೇವಕ, ಅಪ್ರತಿಮ ದೇಶಭಕ್ತ, ಬ್ರಿಟಿಷರನ್ನು ಭಾರತದಿಂದ ಓಡಿಸಿ ಕಿತ್ತೂರು ಸಾಮ್ರಾಜ್ಯವನ್ನು ಬ್ರಿಟಿಷರ ಕೈವಶದಿಂದ ಬಿಡಿಸಿ ಸ್ವಾತಂತ್ರದ ರಣಕಹಳೆಯನ್ನು ಊದುತ್ತಾ, ಗೆರಿಲ್ಲಾ ಮಾದರಿ ತಂತ್ರಜ್ಞಾನದ ಹೋರಾಟ ನಡೆಸಿ, ಬ್ರಿಟಿಷರ ಕುತಂತ್ರದಿಂದ ನೇಣಿಗೆ ಶರಣಾದವರೆ ಸಂಗೊಳ್ಳಿ ರಾಯಣ್ಣ. ಅಂತಹ ಸ್ವಾತಂತ್ರೃ ಹೋರಾಟಗಾರನಿಗೆ ಗೌರವವನ್ನು ನಾವು ಸಲ್ಲಿಸೋಣ ಎಂದು ಶ್ರೀ ಹುಲಜಂತಿ ಮಾಳಿಂಗರಾಯ ಅಜ್ಜನವರು ಹೇಳಿದರು.

ಪಟ್ಟಣದ ಬಿಬಿಆರ್ ಹಾರ್ವರ್ಡ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಆ.23ರಂದು ವಿಜಯಪುರದ ದರ್ಬಾರ್ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಣ್ಣ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕ್ರಾಂತಿಗೆ ಮತ್ತೊಂದು ಹೆಸರೇ ಸಂಗೊಳ್ಳಿ ರಾಯಣ್ಣ ಅಂತಹ ಮಹಾನ್ ವ್ಯಕ್ತಿಗೆ ಗೌರವ ನೀಡಲು ಜಾತಿ-ಮತ ಮರೆತು ಕಾರ್ಯದಲ್ಲಿ ಪಾಲ್ಗೊಳ್ಳಲು ಯುವಕರಿಗೆ ಅವರು ಕರೆ ನೀಡಿದರು.

ಹಾಲುಮತ ಸಮಾಜದಲ್ಲಿ ಪಕ್ಷ ಭೇದ ಮರೆತು ಉನ್ನತ ಮಟ್ಟದ ಮುಂಚೂಣಿ ರಾಜಕೀಯ ನಾಯಕರುಗಳನ್ನು ವಿಜಯಪುರ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಒಬ್ಬರಂತೆ ಮುಂಚೂಣಿ ನಾಯಕರನ್ನು ಜಾತ್ರೆಯಲ್ಲಿ ಗುರುತಿಸಲಾಗುತ್ತದೆ. ಎಸ್.ಟಿ ಮೀಸಲಾತಿ ಕೂಡ ಈ ಜಾತ್ರೆಯಲ್ಲಿ ಪರಿಗಣಿಸಲಾಗುವುದು, ಕೇಂದ್ರದಲ್ಲಿ ಸಮಾಜದ ಉನ್ನತಮಟ್ಟದ ಅಧಿಕಾರಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಆಗ ಅವರು ಕುರುಬ ಸಮಾಜ ಎಸ್.ಟಿ ಹೋರಾಟ ಯಾವ ಹಂತದಲ್ಲಿದೆ ಸ್ಥಿತಿಗತಿ ಬಗ್ಗೆ ಸವಿವರವಾಗಿ ಹೇಳಲಿದ್ದಾರೆ ಎಂದರು.

ಸ್ವಾಮಿ ವಿವೇಕಾನಂದರು ಹೇಳುವಂತೆ ದೇಶದಲ್ಲಿ ಸದೃಢ ಆಡಳಿತ ಮುನ್ನಡೆಸಬೇಕಾದರೆ ಯುವಶಕ್ತಿ ಅನ್ನೋದು ಬಹಳ ಮುಖ್ಯ. ಸಮಾಜದಲ್ಲಿ ಏನಾದರೂ ಬದಲಾವಣೆಯಾಗಬೇಕಾದರೆ ಯುವಶಕ್ತಿಯ ನಿರ್ಧಾರಗಳ ಮೇಲೆ ನಿಂತಿದೆ. ಇತ್ತೀಚಿಗೆ ಕೇಂದ್ರ ಸಚಿವರೊಬ್ಬರು ರಾಜೀನಾಮೆ ನೀಡಲು ಯುವಶಕ್ತಿ ಕಾರಣ. ಅಂತಹ ಯುವ ಸಮಾಜ ಒಗ್ಗೂಡಿ ಒಂದೊಳ್ಳೆ ಸಮಾಜ ಕಟ್ಟೋಣ ಎಂದು ಶ್ರೀಗಳು ನುಡಿದರು.

ಮೋಹನ ಮೇಟಿ, ಪ್ರಕಾಶ ಜಾಲಗೇರಿ, ಬಿಬಿಆರ್ ಹಾರ್ವರ್ಡ್ ಪಿಯು ಕಾಲೇಜಿನ ಅಧ್ಯಕ್ಷ ಎಸ್.ಎಂ. ನೆರಬೆಂಚಿ, ನಾಗರಾಜ ಹಿರೇಕುರುಬರ, ಮುತ್ತಣ್ಣ ಒಡ್ಡೋಡಗಿ, ವಕೀಲರಾದ ಪಿ.ಬಿ. ಗೌಡರ್ ಮತ್ತಿತರರಿದ್ದರು.