Bridge named after the Seer 
ರಾಜ್ಯ

ಸೇತುವೆಗೆ ಶ್ರೀಗಳ ಹೆಸರು ನಾಮಕರಣ

ರೇಷ್ಮೆ ನಗರ ಡೆಸ್ಕ್
ಕನಕಪುರ: ಡಾ. ಮುಮ್ಮಡಿ ನಿರ್ವಾಣ ಸ್ವಾಮೀಜಿ ಮೌನವೇ ಮಂತ್ರ, ಕಾಯಕವೇ ಪೂಜೆ ಎಂದು ನಂಬಿ ಅವರು ಸಾಧನೆ ಮಾಡಿಕೊಂಡು ಬಂದಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶ್ರೀಗಳ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುವಿನ ಪಾದಗಳಿಗೆ ಅಣೆ ಇಟ್ಟರೆ ನಮಗೆ ಜ್ಞಾನ ಹೆಚ್ಚುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಇದು ಕಣ್ಣೀರು ಹಾಕುವ ದಿನವಲ್ಲ. ಶ್ರೀಗಳ ಕಾರ್ಯವನ್ನು ಉಳಿಸಿಕೊಂಡು ಮುಂದುವರಿಸುವ ದಿನ ಶ್ರೀಗಳು ಇಲ್ಲಿ ಒಂದು ಸೇತುವೆ ಮಾಡಬೇಕೆಂದು ಬಹಳಷ್ಟು ಬಾರಿ ಹೇಳಿದ್ದರು. ಇಂದು ಶ್ರೀಗಳ ಚಿಂತನೆಯಂತೆ ಸೇತುವೆ ಉದ್ಘಾಟನೆ ಮಾಡಿರುವುದು ನನ್ನ ಭಾಗ್ಯ. ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಹೆಸರನ್ನೇ ಈ ಸೇತುವೆಗೆ ನಾಮಕರಣ ಮಾಡಲಾಗಿದೆ ಎಂದರು.
ನನಗೂ ಹಾಗೂ ಈ ಸಮಾಜಕ್ಕೂ ದೊಡ್ಡ ಸಂಬಂಧ, ಬಾಂಧವ್ಯ ಇದೆ. ನಮ್ಮ ವೀರಗಂಗಾಧರ ಅಜ್ಜಯ್ಯನವರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾಡು ಧರ್ಮ ಸಾಮ್ರಾಜ್ಯವಾಗಲಿ. ಭಕ್ತಿಯ ನೆಲೆ ಬೀಡಾಗಲಿ ಎಂದು ಮಾರ್ಗದರ್ಶನ ನೀಡಿದ್ದಾರೆ. ನನಗೂ ಶಿವನ ಪಾದಕ್ಕೂ ಏನು ಸಂಬಂಧವೋ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಹಿಂದಿನ ತಲೆಮಾರುಗಳಿಂದ ಯಾರೇ ಹುಟ್ಟಿದರೂ ಕೆಂಪೇಗೌಡ ಎಂದು ಹೆಸರಿಡುವ ಪ್ರವೃತ್ತಿ ಇದೆ. ನಮ್ಮ ತಾಯಿ ಶಿವಾಲ್ದಪ್ಪ ಬೆಟ್ಟದ ಶಿವನಿಗೆ ಹರಕೆ ಕಟ್ಟಿಕೊಂಡ ಹಿನ್ನೆಲೆಯಲ್ಲಿ ನನಗೆ ಶಿವಕುಮಾರ್ ಎಂದು ಹೆಸರಿಟ್ಟರು.
ದೇಗುಲ ಮಠದ ಸ್ವಾಮೀಜಿ ಬಳಿ ಆಶೀರ್ವಾದ ಪಡೆದಿದ್ದರು. ನಮ್ಮ ಮನೆಯಲ್ಲಿ ಏನೇ ಕೆಲಸವಾಗಬೇಕಾದರೂ ಈ ಮಠಕ್ಕೆ ಬಂದು ಮಾರ್ಗದರ್ಶನ ಪಡೆಯುತ್ತಿದ್ದರು. ನಾನು ಧರ್ಮದಿಂದ ಏಳಬೇಕು, ಧರ್ಮದಿಂದ ಬಾಳಬೇಕು, ಧರ್ಮದಿಂದ ಆಳಬೇಕು, ಧರ್ಮದಿಂದ ತಾಳ್ಮೆಯಿಂದರಬೇಕು ಎಂದು ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದರು.
ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದೊಡ್ಡ ಶಕ್ತಿಯಾಗಿ ರೂಪಿಸಿದ್ದಾರೆ. ಎಷ್ಟೇ ರಾಜಕೀಯ ಜಂಜಾಟವಿದ್ದರೂ ಕನಕಪುರಕ್ಕೆ ಬಂದಾಗ ಶ್ರೀಗಳನ್ನು ಭೇಟಿ ಮಾಡಿ ಮನಸ್ಸಿಗೆ ನೆಮ್ಮದಿ ಪಡೆದುಕೊಳ್ಳುತ್ತಿದ್ದೆ. ಈ ಮಠವನ್ನು ಕೇವಲ ಡಿ.ಕೆ.ಶಿವಕುಮಾರ್ ಮಾತ್ರವಲ್ಲ ಎಲ್ಲರೂ ಸೇರಿ ಉಳಿಸಬೇಕು. ನಾವು ಎಷ್ಟೇ ಸಂಪಾದನೆ ಮಾಡಿದರೂ ಹೊತ್ತುಕೊಂಡು ಹೋಗುವುದಿಲ್ಲ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಹುಟ್ಟುಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಹೀಗಾಗಿ ನಮ್ಮ ಜೀವನದಲ್ಲಿ ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ದಾನ ಧರ್ಮ ಮಾಡಬೇಕು ಎಂದು ತಿಳಿಸಿದರು.