ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಹಸೀಲ್ದಾರ್ ಶ್ರೀನಿವಾಸ್, ಇಒ ರವಿಚಂದ್ರ, ಡಾ.ಪೂರ್ಣಿಮಾ, ದೀಪಾ ಇದ್ದರು. 
ರಾಜ್ಯ

ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ತಾಯಿ ಹಾಲು ಮುಖ್ಯ

ಎಚ್.ಡಿ.ಕೋಟೆ:

ವಿಶ್ವಸ್ತನ್ಯಪಾನ ಸಪ್ತಾಹವನ್ನು ಪ್ರತಿ ವರ್ಷ ಆ.1 ರಿಂದ 7ರವರೆಗೆ ಆಚರಿಸಲಾಗುತ್ತದೆ. ಇದು ಶಿಶುಗಳ ಪೋಷಣೆ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯಕರ ಬೆಳವಣಿಗೆಯ ಮಹತ್ವವನ್ನು ಉತ್ತೇಜಿಸುತ್ತದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಗುವಿಗೆ ತಾಯಿಯ ಹಾಲು ಮೊದಲನೇ ಲಸಿಕೆ ಇದ್ದಂತೆ, ಮಗು ಜನಿಸಿದ ಮೊದಲ ಆರು ತಿಂಗಳ ಕಾಲ ವಿಶೇಷವಾಗಿ ತಾಯಿ ಹಾಲು ಮಾತ್ರ ನೀಡಬೇಕು. ತಾಯಿಯ ಹಾಲಿನಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 6 ತಿಂಗಳು ತುಂಬಿದ ನಂತರ ತಾಯಿ ಹಾಲಿನೊಂದಿಗೆ ಪೂರಕ ಆಹಾರ ಆರಂಭಿಸಿ, 2 ವರ್ಷದವರೆಗೆ ಮುಂದುವರಿಸಬೇಕು. ಇದರಿಂದ ಮಗು ಆರೋಗ್ಯ ಪೂರ್ಣವಾಗಿ ಬೆಳೆಯಲು ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಪೂರ್ಣಿಮಾ ಮಾತನಾಡಿ, ಆಗ ತಾನೇ ಹುಟ್ಟಿದ ಮಗುವಿಗೆ ದೊರೆಯುವ ಮೊದಲ ಆಹಾರ ತಾಯಿಯ ಹಾಲು. ಇದು ಕೇವಲ ಆಹಾರವಲ್ಲ, ಮಗುವಿಗೆ ಸಿಗುವ ಮೊದಲ ರೋಗನಿರೋಧಕ ರಕ್ಷಣೆಯಾಗಿದೆ. ಜನನದ ನಂತರ ಮೊದಲ ಕೆಲವು ದಿನಗಳಲ್ಲಿ ಬರುವ ಹಳದಿ ಬಣ್ಣದ ದಪ್ಪ ಹಾಲನ್ನು ಕೊಲೊಸ್ಟ್ರಮ್ ಎಂದು ಕರೆಯಲಾಗುತ್ತದೆ. ಇದರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರತಿಕಾಯಗಳು, ಪ್ರೋಟೀನ್‌ಗಳು ಮತ್ತು ಪೋಷಕಾಂಶಗಳು ಹೇರಳವಾಗಿರುತ್ತವೆ ಎಂದು ತಿಳಿಸಿದರು.
ತಾಯಿಯ ಎದೆಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಎಲ್ಲ ಅಗತ್ಯ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಇರುತ್ತವೆ. ಇದು ಸುಲಭವಾಗಿ ಜೀರ್ಣವಾಗುತ್ತದೆ ಹಾಗೂ ಮಗುವಿಗೆ ಹೊಟ್ಟೆನೋವು, ಅತಿಸಾರ, ನ್ಯುಮೋನಿಯಾ, ಕಿವಿಯ ಸೋಂಕು ಸೇರಿದಂತೆ ಅನೇಕ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಎದೆಹಾಲು ಕುಡಿದ ಮಕ್ಕಳಲ್ಲಿ ಅಲರ್ಜಿ, ಸ್ಥೂಲಕಾಯ, ಮಧುಮೇಹ ಹಾಗೂ ಕೆಲವು ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಜತೆಗೆ ಮೆದುಳಿನ ಬೆಳವಣಿಗೆ ಉತ್ತಮವಾಗಲು ಸಹಕಾರಿ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ರೀನಿವಾಸ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರವಿಚಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ದೀಪಾ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ, ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು, ಸೆಂಟ್‌ಮೇರಿಸ್ ಆಸ್ಪತ್ರೆಯ ಸಿಬ್ಬಂದಿ, ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು ಇದ್ದರು.