ಕಲಬುರಗಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್​.ಎಂ.ರೇವಣ್ಣ ಚಾಲನೆ ನೀಡಿದರು. ರಾಹುಲ್​ ಸಂಕನೂರ, ಚಂದ್ರಿಕಾ ಪರಮೇಶ್ವರ, ಶರಣಯ್ಯ ಮಠಪತಿ, ವಿಜಯಕುಮಾರ ಕಟ್ಟಿಮನಿ, ಸೋಮಶೇಖರ ಹಿರೇಮಠ, ಸುರೇಶ್​ ತಿಪ್ಪಶೆಟ್ಟಿ, ನರಸಿಂಹಲು ಕುಂಬಾರ ಇದ್ದರು. 
ರಾಜ್ಯ

ಗ್ಯಾರಂಟಿ ಯೋಜನೆ ದುರ್ಬಳಕೆಗೆ ಬ್ರೇಕ್​

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್​.ಎಂ.ರೇವಣ್ಣ ಹೇಳಿಕೆ
  • ಕಲಬುರಗಿಯಲ್ಲಿ ಪ್ರಗತಿ ಪರಿಶೀಲನೆ
ಕಲಬುರಗಿ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದು, ದುರುಪಯೋಗ ತಡೆಗಟ್ಟುವ ಮೂಲಕ ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್​.ಎಂ. ರೇವಣ್ಣ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆ ಅನುಷ್ಠಾನ ವೇಳೆ ಪತ್ತೆಯಾದ ಅಕ್ರಮ ತಡೆಯಲು ಸರ್ಕಾರ ಕ್ರಮ ಕೈಗೊಂಡಿದ್ದು, ತಪ್ಪಾಗಿ ವರ್ಗಾವಣೆಯಾಗಿದ್ದ ಸುಮಾರು 14 ರಿಂದ 15 ಕೋಟಿ ಮೊತ್ತವನ್ನು ವಾಪಸ್​ ಪಡೆಯಲಾಗಿದೆ. ಉಳಿದಿರುವ ಸುಮಾರು 100 ಕೋಟಿ ಮೊತ್ತದ ವಸೂಲಿಗೆ ಬ್ಯಾಂಕುಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ಜರುಗಿಸಲಾಗುತ್ತಿದೆ ಎಂದರು.
ಮೃತರ ಖಾತೆಗೆ ಹಣ ಜಮೆ
ಪರಿಶೀಲನೆ ವೇಳೆ ಮೃತಪಟ್ಟವರ ಖಾತೆಗಳಿಗೆ ಹಣ ಜಮೆಯಾಗಿರುವುದು, ಒಂದೇ ಬ್ಯಾಂಕ್​ ಖಾತೆಗೆ 20ಕ್ಕೂ ಹೆಚ್ಚು ಫಲಾನುಭವಿಗಳನ್ನು ಲಿಂಕ್​ ಮಾಡಿರುವುದು ಹಾಗೂ ಬ್ಯಾಂಕ್​ ಖಾತೆ ಇಲ್ಲದಿದ್ದರೂ ಹಣ ವರ್ಗಾವಣೆಯಾಗಿರುವಂತಹ ಗಂಭೀರ ಲೋಪಗಳು ಬೆಳಕಿಗೆ ಬಂದಿವೆ ಎಂದು ರೇವಣ್ಣ ಹೇಳಿದರು.
ಗೃಹಲಕ್ಷ್ಮೀ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ 9,156 ಮೃತ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅವರ ಖಾತೆಗಳಿಗೆ ಒಟ್ಟು 4.27 ಕೋಟಿ ರೂ. ಜಮೆಯಾಗಿದೆ. ಈ ಪೈಕಿ 5,336 ಖಾತೆಗಳಲ್ಲಿ ಹಣ ವರ್ಗಾವಣೆ ತಡೆಹಿಡಿಯಲಾಗಿದ್ದು, ಈವರೆಗೆ ಕೇವಲ 25.84 ಲಕ್ಷ ರೂ. ಮಾತ್ರ ವಸೂಲಿ ಮಾಡಲಾಗಿದೆ.
ವಸೂಲಾತಿ ಪ್ರಗತಿ ತೃಪ್ತಿಕರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ 8 ರಿಂದ 10 ದಿನಗಳೊಳಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆ, ಮನೆ ಸಮೀೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನ್ನಭಾಗ್ಯ ಯೋಜನೆ ಅಕ್ರಮ ತಡೆ
ಅನ್ನಭಾಗ್ಯ ಯೋಜನೆಯಡಿ ಆಹಾರ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ನಿಯಮ ಉಲ್ಲಂಸಿದ 14 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗಿದೆ. 6,874 ಬೋಗಸ್​ ಪಡಿತರ ಚೀಟಿ ರದ್ದುಪಡಿಸಿ, 9,631 ಕ್ವಿಂಟಾಲ್​ ಅಕ್ರಮ ಆಹಾರ ಧಾನ್ಯ ಜಪ್ತಿ ಮಾಡಲಾಗಿದೆ. ಜುಲೈ 2023ರಿಂದ ಡಿಸೆಂಬರ್​ 2024ರವರೆಗೆ ಅನ್ನಭಾಗ್ಯ ಯೋಜನೆಯಡಿ ಡಿಬಿಟಿ ಮೂಲಕ 508.72 ಕೋಟಿ ಫಲಾನುಭವಿಗಳ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದರು.
ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳಿಗೆ ಬಿಡುಗಡೆಯಾಗಬೇಕಿದ್ದ ಬಾಕಿ ಮೊತ್ತದಲ್ಲಿ ಶೇ.80ರಷ್ಟು, ಅಂದರೆ 608 ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿಯಾಗಿ 124 ಬಸ್​ ಶೆಡ್ಯೂಲ್​ಗಳನ್ನು ಆರಂಭಿಸಲಾಗಿದೆ. ಬಸ್​ ನಿಲ್ದಾಣಗಳಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಸಾರ್ವಜನಿಕ ಸೌಲಭ್ಯದ ದೃಷ್ಟಿಯಿಂದ ಪೊಲೀಸ್​ ಚೌಕಿ ಮತ್ತು ನಮ್ಮ ಕ್ಲಿನಿಕ್​ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ
ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಸ್ಥಗಿತಗೊಳಿಸುತ್ತದೆ ಎಂಬ ವದಂತಿಗಳಿಗೆ ಕಿವಿಗೊಡಬೇಡಿ. ಯೋಜನೆಗಳು ನಿಲ್ಲುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಎಂದಿನಂತೆ ಮುಂದುವರಿಯಲಿವೆ. ಆದರೆ ಆದಾಯ ತೆರಿಗೆ ಪಾವತಿದಾರರು ಅಥವಾ ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆಯುತ್ತಿರುವವರನ್ನು ಗುರುತಿಸಿ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಸ್ಪಷ್ಟಪಡಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯೆ ಚಂದ್ರಿಕಾ ಪರಮೇಶ್ವರ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್​ ಸಂಕನೂರ, ಮುಖ್ಯ ಯೋಜನಾಧಿಕಾರಿ ಶರಣಯ್ಯ ಮಠಪತಿ, ಸಮಿತಿ ಉಪಾಧ್ಯಕ್ಷ ವಿಜಯಕುಮಾರ ಕಟ್ಟಿಮನಿ, ಸೋಮಶೇಖರ ಹಿರೇಮಠ, ಸುರೇಶ್​ ತಿಪ್ಪಶೆಟ್ಟಿ, ನರಸಿಂಹಲು ಕುಂಬಾರ ಇತರರಿದ್ದರು.
"

ಗ್ಯಾರಂಟಿ ಯೋಜನೆಗಳಡಿ ಫಲಾನುಭವಿಗಳ ಖಾತೆಗೆ ಜಮೆಯಾಗುವ ಹಣವನ್ನು ಕೆಲ ಬ್ಯಾಂಕುಗಳು ಹಳೆಯ ಸಾಲಗಳಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದು ನಿಯಮಬಾಹಿರವಾಗಿದ್ದು, ಇಂತಹ ಕ್ರಮ ತಕ್ಷಣ ನಿಲ್ಲಿಸುವಂತೆ ಬ್ಯಾಂಕುಗಳಿಗೆ ಎಚ್ಚರಿಕೆ ನೀಡಲಾಗಿದೆ.

— ಎಚ್​.ಎಂ.ರೇವಣ್ಣ, ಅಧ್ಯಕ್ಷ, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ.