ಕಲಬುರಗಿ ಜೆಸ್ಕಾಂ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಧ್ಯಕ್ಷ ಪ್ರವಿಣ ಪಾಟೀಲ್ ಹರವಾಳ್ ಮಾತನಾಡಿದರು. ನಿರ್ದೇಶಕ (ತಾಂತ್ರಿಕ) ಚಂದ್ರಶೇಖರ ಪಾಟೀಲ್, ಇಂಜಿನಿಯರ್ಗಳು ಇದ್ದರು.
ಕಲಬುರಗಿ: ವಿದ್ಯುತ್ ವ್ಯತ್ಯಯ ಹಾಗೂ ಕೆಟ್ಟುಹೋದ ಟ್ರಾನ್ಸಫಾರ್ಮರ್ಗಳ ತ್ವರಿತ ಬದಲಾವಣೆಯಲ್ಲಿ ವಿಳಂಬವಾಗುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ವಿಳಂಬ ಮಾಡದೆ ಬದಲಾವಣೆ ಮಾಡಬೇಕು ಎಂದು ಜೆಸ್ಕಾಂ ಅಧ್ಯ ಪ್ರವಿಣ್ ಪಾಟೀಲ್ ಹರವಾಳ ಖಡಕ್ ಸೂಚನೆ ನೀಡಿದರು.
ಕಲಬುರಗಿ ಜೆಸ್ಕಾಂ ಕಚೇರಿಯಲ್ಲಿ ಸೋಮವಾರ ಮಂಗಳವಾರ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲಬುರಗಿ ಗ್ರಾಮೀಣ, ಆಳಂದ, ಆಫಜಲಪುರ, ಕಾಳಗಿ, ಫರಹತಾಬಾದ್, ಹೆರೂರ್ ಸೇರಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಟ್ರಾನ್ಸಫಾರ್ಮರ್ ದೋಷ ಗಂಭೀರವಾಗಿದ್ದನ್ನು ಗಮನಿಸಿ, ಈ ಸಭೆ ಕರೆಯಲಾಗಿದೆ. ಕೆಟ್ಟುಹೋದ ಟ್ರಾನ್ಸಫಾರ್ಮರ್ಗಳನ್ನು ತಣ ಬದಲಾಯಿಸಬೇಕು. ರೈತರಿಂದ ಹಣ ಪಡೆದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬೇಸಿಗೆ ತಾಪಮಾನ ಹೆಚ್ಚಿರುವ ಹಿನ್ನೆಲೆಯಲ್ಲಿ ನೀರಿನ ಅಭಾವದಿಂದ ಬೆಳೆಗಳು ಒಣಗದಂತೆ ತಡೆಯಲು, ಟ್ರಾನ್ಸಫಾರ್ಮರ್ ಬದಲಾವಣೆ ತುರ್ತಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ರೈತರಿಗೆ ಸರ್ಕಾರದಿಂದ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಹೀಗಾಗಿ ರೈತರು ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡಬಾರದು ಎಂದು ಮನವಿ ಮಾಡಿದರು. ಅನಧಿಕೃತ ಸಂಪರ್ಕದಿಂದ ಟ್ರಾನ್ಸಫಾರ್ಮರ್ಗಳ ಮೇಲೆ ಹೆಚ್ಚುವರಿ ಒತ್ತಡ ಬಂದು ಪದೇ ಪದೇ ದುರಸ್ತಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಜೆಸ್ಕಾಂನ ನಿರ್ದೇಶಕ (ತಾಂತ್ರಿಕ) ಚಂದ್ರಶೇಖರ ಪಾಟೀಲ್, ಮುಖ್ಯ ಹಣಕಾಸು ಅಧಿಕಾರಿ ಸೇರಿ ಸಂಸ್ಥೆಯ ವ್ಯಾಪ್ತಿಯ ಎಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ಗಳು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳು ಭಾಗವಹಿಸಿದ್ದರು.