ಜರ್ನಾದನ ರೆಡ್ಡಿ ಮತ್ತು ಶಾಸಕ ನಾರಾಭರತ್ ರೆಡ್ಡಿ ಬಣಗಳ ಮಧ್ಯೆ ಜಗಳ
- ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ದಂಗಲ್
- ಶಾಸಕ ಜನಾರ್ದನ ರೆಡ್ಡಿ ಮತ್ತು ನಾರಾಭರತ್ ರೆಡ್ಡಿ ಬಣದಿಂದ ಘರ್ಷಣೆ
- ಕಲ್ಲು ತೂರಾಟ, ಗನ್ಮ್ಯಾನ್ನಿಂದ ಗಾಳಿಯಲ್ಲಿ ಗುಂಡು
- ಘರ್ಷಣೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವು
ಬಳ್ಳಾರಿ: ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಮತ್ತು ಕಾಂಗ್ರೆಸ್ ಶಾಸಕ ನಾರಾಭರತ್ ರೆಡ್ಡಿ ಅವರ ಗುಂಪುಗಳ ನಡುವೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಆರಂಭವಾದ ಜಗಳ, ಗುಂಡು ಹಾರಿಸುವವರೆಗೆ ನಡೆದಿರುವುದು ಸದ್ಯ ಭಾರೀ ಘರ್ಷಣೆಗೆ ಕಾರಣವಾಗಿದೆ.
ಬ್ಯಾನರ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಜಗಳ ಶುರುವಾಗಿದ್ದು, ಜನಾರ್ದನ ರೆಡ್ಡಿ ಮನೆ ಮುಂದೆ ಘರ್ಷಣೆ ಜೋರಾಗಿದೆ. ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ. ಎರಡು ಗುಂಪುಗಳಿಂದ ಕಲ್ಲು ತೂರಾಟ ಸಂಭವಿಸಿದ್ದು, ಈ ವೇಳೆ ನಾರಾಭರತ್ ರೆಡ್ಡಿ ಗನ್ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವಿಚಾರ ಹೊರಬೀಳುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಕೋಲಾಹಲವೇ ಸೃಷ್ಟಿಯಾಗಿದೆ.
ಘರ್ಷಣೆಗೆ ಕಾರಣವೇನು?
ಜನವರಿ 3ರಂದು ವಾಲ್ಮೀಕಿ ಪುತ್ಥಳಿ ಅನಾವರಣ ಹಿನ್ನೆಲೆ, ಬ್ಯಾನರ್ ಅಳವಡಿಕೆ ಮಾಡಲಾಗುತ್ತಿತ್ತು. ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಅಳವಡಿಕೆ ಮಾಡುತ್ತಿದ್ದ ಕಾರಣ, ರೆಡ್ಡಿ ಬಣ ವಿರೋಧ ಮಾಡಿತು. ಈ ವೇಳೆ, ಏಕಾಏಕಿ ಗಲಾಟೆ ಮಾಡಿಕೊಂಡ ಎರಡು ಗುಂಪುಗಳು, ಕೈಮೀಲಾಯಿಸುವ ಹಂತಕ್ಕೆ ಹೋಯಿತು. ಸ್ಥಳಕ್ಕೆ ತಕ್ಷಣವೇ ಪೊಲೀಸರು ಬಂದಿದ್ದು, ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದ್ದಾರೆ.
ಜನಾರ್ದನ ರೆಡ್ಡಿ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ಮಾತನಾಡಿರುವ ಜರ್ನಾದನ ರೆಡ್ಡಿ, "ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಅವರ ಅಪ್ತ ಸತೀಶ್ ರೆಡ್ಡಿ ಹಾಗೂ ಭರತ್ ರೆಡ್ಡಿ ತಂದೆ ನಾರಾ ಸೂರ್ಯನಾರಾಣ ರೆಡ್ಡಿಯಿಂದ ನನ್ನ ಹತ್ಯೆಗೆ ಸಂಚು. ಬ್ಯಾನರ್ ಗಲಾಟೆ ನೆಪದಲ್ಲಿ ನಮ್ಮ ನಿವಾಸದ ಮುಂದೆ ಗನ್ ಮ್ಯಾನ್ಗಳಿಂದ ಗುಂಡಿನ ದಾಳಿ ನಡೆಸಿದ್ದಾರೆ. ಗಂಗಾವತಿಯಿಂದ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ, ಗನ್ಮ್ಯಾನ್ಗಳು ಫೈರಿಂಗ್ ನಡೆಸಿದರು" ಎಂದು ಗಂಭೀರ ಆರೋಪ ಎಸಗಿದ್ದಾರೆ.
ಫೈರಿಂಗ್ ಆದ ಬುಲೆಟ್ ತೋರಿಸಿದ ಜನಾರ್ದನ ರೆಡ್ಡಿ
ವಾಲ್ಮೀಕಿ ಪುತ್ಥಳಿ ಪ್ರತಿಷ್ಟಾಪನೆ ಹೆಸರಲ್ಲಿ ಊರಿಗೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಕೊಲೆಗೆಡುಕರನ್ನು ಹಿಂದಿಟ್ಟುಕೊಂಡು ನಾರಾ ಭರತ್ ರೆಡ್ಡಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಗಾಳಿಯಲ್ಲಿ ಹಾರಿಬಿದ್ದ ಗುಂಡನ್ನು ಹಿಡಿದು ಮಾಧ್ಯಮಗಳಿಗೆ ತೋರಿಸಿದರು.
ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಸಾವು!
ಬಳ್ಳಾರಿಯಲ್ಲಿ ನಡೆದ ಘರ್ಷಣೆ ವೇಳೆ ಫೈರಿಂಗ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದರು.