ಹುಲಿಗಿನಮೊರಡಿ ವೆಂಕಟರಮಣಸ್ವಾಮಿ ದೇವಾಲಯದ ಹೊರನೋಟ.
- ಹುಲಿಗಿನ ಮೊರಡಿ ವೆಂಕಟರಮಣಸ್ವಾಮಿ ದೇವಸ್ಥಾನ
- ಕಂಕಣ ಹಾಗೂ ಸಂತಾನ ಭಾಗ್ಯಕ್ಕೆ ಹೆಸರುವಾಸಿ
ಗುಂಡ್ಲುಪೇಟೆ: ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿರುವ ತಾಲೂಕಿನ ತೆರಕಣಾಂಬಿ ಬಳಿಯಿರುವ ಹುಲಿಗಿನ ಮೊರಡಿ ವೆಂಕಟರಮಣಸ್ವಾಮಿ ದೇವಸ್ಥಾನವನ್ನು ಚಿಕ್ಕ ತಿರುಪತಿ ಎಂದೇ ಕರೆಯಲಾಗುತ್ತಿದ್ದು, ಕಂಕಣ ಹಾಗೂ ಸಂತಾನ ಭಾಗ್ಯಕ್ಕೆ ಹೆಸರುವಾಸಿಯಾಗಿದೆ.
ಅವಿವಾಹಿತರು ಇಲ್ಲಿ ಬಂದು ಕಂಕಣ ಕಟ್ಟಿಸಿಕೊಂಡರೆ ಕಂಕಣ ಭಾಗ್ಯ ಹಾಗೂ ಹಾಗೂ ಮಕ್ಕಳಿಲ್ಲದ ದಂಪತಿ ಸಂಕ್ರಾಂತಿ ದಿನದಂದು ನಡೆಯುವ ದಿವ್ಯ ರಥೋತ್ಸವ ಹಾಗೂ ಮೊದಲನೇ ಶ್ರಾವಣ ಶನಿವಾರ ನಡೆಯುವ ಚಿಕ್ಕ ರಥೋತ್ಸವದಲ್ಲಿ ಗರುಡಬುತ್ತಿ ಪಡೆದುಕೊಂಡರೆ ಸಂತಾನ ಭಾಗ್ಯ ದೊರಕುತ್ತಿದೆ ಎಂಬ ನಂಬಿಕೆ ಇಂದಿಗೂ ಭಕ್ತರ ಮನದಲ್ಲಿ ನೆಲೆಯೂರಿದೆ.
ದೇವಾಲಯ ಹಿನ್ನೆಲೆ: ಕ್ರಿ.ಶ.1498ರಲ್ಲಿ ತೆರಕಣಾಂಬಿಯ ಸಾಹುಕಾರ ದಾಸಕೇಶವಶೆಟ್ಟಿ ಈ ದೇವಸ್ಥಾನವನ್ನು ಕಟ್ಟಿಸಿದ್ದರು. ಕ್ರಿ.ಶ.1620ರಲ್ಲಿ ಚಿಕ್ಕಹಳ್ಳಿ ಅಪ್ಪಣ್ಣಗೌಡರು 4 ಅಂಕ ಕೈಸಾಲೆಯನ್ನು, ಕ್ರಿ.ಶ.1629ರಲ್ಲಿ ತೆರಕಣಾಂಬಿ ದೊಡ್ಡನಾರಣಪ್ಪ ಅವರು ಶ್ರೀ ವೈಕುಂಠನಾರಾಯಣಸ್ವಾಮಿ ಗುಡಿ ಮತ್ತು ಅಮ್ಮನವರ ಗುಡಿಗಳನ್ನು ಕಟ್ಟಿಸಿದರು. ಕ್ರಿ.ಶ.1678ರಲ್ಲಿ ತೆರಕಣಾಂಬಿಯ ಚೆನ್ನಯ್ಯಶೆಟ್ಟಿ ಅವರು ಪಾತಾಳ ಮಂಟಪವನ್ನು ಮತ್ತು ಕ್ರಿ.ಶ.1696ರಲ್ಲಿ ಮೈಸೂರು ಸಂಸ್ಥಾನದ ಚಿಕ್ಕದೇವರಾಜ ಒಡೆಯರ ಧರ್ಮಪತ್ನಿ ದೊಡ್ಡಮುದ್ದಮ್ಮ ಬೆಟ್ಟದ ಮೇಲಿನ ಕೋಟೆಯನ್ನು ಕಟ್ಟಿಸಿದರೆಂಬುದಕ್ಕೆ ದಾಖಲೆಗಳಿವೆ.
ಮಾಂಡವ್ಯ ಮಹರ್ಷಿಗಳು ಶ್ರೀಮನ್ನಾರಾಯಣನ ಸಾನ್ನಿಧ್ಯವನ್ನು ಪಡೆಯಲು ಪುಷ್ಕರವೆಂಬ ದಿವ್ಯ ಕ್ಷೇತ್ರದಲ್ಲಿ ತಪಸ್ಸು ಮಾಡಿದರೂ ಸಿದ್ಧಿಸದ ಕಾರಣ ಅವರು ತಿರುಪತಿಗೆ ಬಂದು ತಪಸ್ಸು ಮಾಡಿದರು. ಇವರ ತಪಸ್ಸಿಗೆ ಮೆಚ್ಚಿದ ನಾರಾಯಣ ವೃದ್ಧ ಬ್ರಾಹ್ಮಣ ವೇಷದಲ್ಲಿ ಬಂದು ದಕ್ಷಿಣ ಶೇಷಾದ್ರಿ (ಹುಲಗಿನ ಮುರಡಿ)ಯಲ್ಲಿ ಅಕ್ಷರಾನುಸಂಧಾನ ಪೂರ್ವಕವಾಗಿ ಭಕ್ತಿಯಿಂದ ತಪಸ್ಸು ಮಾಡಿದರೆ ಅವರ ಇಷ್ಟಾರ್ಥ ನೆರವೇರುವುದು ಎಂದು ಹೇಳಿ ಅಂತರ್ಧಾನಾದನು. ನಂತರ ಮಾಂಡವರು ಇಲ್ಲಿಗೆ ಬಂದು ತಪಸ್ಸು ಮಾಡಿ ಶ್ರೀನಿವಾಸನ ದರ್ಶನ ಪಡೆಯುತ್ತಾರೆ.
ಇನ್ನು ಅಗಸ್ತ್ಯ ಮುನಿಗಳು ವೈಕುಂಠ ತೀರ್ಥದ ಬಳಿ ನೀರು ತರಲು ಹೋಗಿದ್ದಾಗ ರಾಕ್ಷಸನೊಬ್ಬ ಅವರನ್ನು ಹಿಡಿದು ಕೊಂಡನಂತೆ. ಆಗ ಅವರು ಶ್ರೀನಿವಾಸನನ್ನು ಪ್ರಾರ್ಥಿಸಿದಾಗ ವ್ಯಾಘ್ರ ರೂಪದಲ್ಲಿ ಬಂದು ರಾಕ್ಷಸನನ್ನು ಸಂಹರಿಸುತ್ತಾನೆ. ಹೀಗೆ ಶ್ರೀನಿವಾಸನು ವ್ಯಾಘ್ರನ ರೂಪದಿಂದ ಬಂದ ಗಿರಿಯೇ ವ್ಯಾಘ್ರಚಲವೆಂದು ಪ್ರತೀತಿಯಿದೆ.
ವರ್ಷದ ಮೊದಲ ರಥೋತ್ಸವ: ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದಲ್ಲಿ ಪ್ರತಿ ವರ್ಷವೂ ಸಂಕ್ರಾಂತಿಯಂದು ವರ್ಷದ ಮೊದಲ ರಥೋತ್ಸವ ನಡೆಯಲಿದೆ. ರಥೋತ್ಸವಕ್ಕೆ ರಾಜ್ಯ ಮತ್ತು ನೆರೆಯ ರಾಜ್ಯಗಳಿಂದಲೂ ಅಪಾರ ಭಕ್ತರು ಬರುತ್ತಾರೆೆ. ರಥೋತ್ಸವಕ್ಕೆ ಮೊದಲೇ ಹತ್ತು ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಾಗುತ್ತದೆ. ಬಿದಿರಿನ ಬಂಬುಗಳಿಂದ ಸಿದ್ಧಪಡಿಸುವ ರಥವನ್ನು ಸಂಕ್ರಾಂತಿಯಂದು ಎಳೆಯಲಾಗುತ್ತದೆ.
ಪೌರಾಣಿಕ ಹಿನ್ನೆಲೆ: ಹಿಂದೆ ವಾಯು ಹಾಗೂ ಆದಿಶೇಷ ಯಾರು ಶಕ್ತಿಶಾಲಿಗಳು ಎಂದು ಪರೀಕ್ಷಿಸುವ ಜಿದ್ದಿಗೆ ಬಿದ್ದರು. ಆದಿಶೇಷ ಮೇರು ಪರ್ವತದ ಶಿಖರವನ್ನು ಸುತ್ತಿಕೊಂಡರೆ ವಾಯು ಜೋರಾಗಿ ಗಾಳಿ ಬೀಸಿ ಆದಿಶೇಷನನ್ನು ಬಂಧನದಿಂದ ಬಿಡಿಸಲು ಪ್ರಯತ್ನಿಸಿದ. ಆದರೆ ಅದು ಸಾಧ್ಯವಾಗದೆ ಮೇರು ಶಿಖರವೇ ಎರಡು ಭಾಗವಾಗಿ ಮುರಿದು ಬಿದ್ದಿತಂತೆ. ಇದರಲ್ಲಿ ಒಂದು ವೃಷಭಾದ್ರಿ (ಈಗಿನ ತಿರುಪತಿ) ಮತ್ತೊಂದು ಹೋಳು ದಕ್ಷಿಣ ಶೇಷಾದ್ರಿ(ಹುಲಿಗಿನ ಮೊರಡಿ) ಎಂದು ಹೆಸರಾಯಿತು.
ದೇವಾಲಯದ ವಿಶೇಷ: 300 ಅಡಿಗಳಷ್ಟು ಎತ್ತರದ ಬೆಟ್ಟದ ಮೇಲಿರುವ ದೇವಾಲಯದಲ್ಲಿ ಪೂರ್ವಾಭಿಮುಖವಾಗಿ ಪ್ರಸನ್ನವದನನಾಗಿರುವ ಶ್ರೀನಿವಾಸನು ಅಭಯ ಹಸ್ತನಾಗಿ ಶಂಖ, ಚಕ್ರಗಳನ್ನು ಧರಿಸಿದ್ದಾನೆ. ಎಡಪಾರ್ಶ್ವದಲ್ಲಿ ಅಂಡಾಳ್ ಅಥವಾ ನೀಳದೇವಿ, ಒಳಭಾಗದ ಪಾರ್ಶ್ವದಲ್ಲಿ ಶ್ರೀ ವೈಕುಂಠನಾಥಸ್ವಾಮಿ ಶ್ರೀದೇವಿ ಮತ್ತು ಭೂದೇವಿ ಸಹಿತನಾಗಿದ್ದು ಮೂರು ದ್ವಾರಗಳಲ್ಲೂ ದ್ವಾರಪಾಲಕರಿದ್ದಾರೆ. ಸ್ಥಳಪುರಾಣದ ಪ್ರಕಾರ ವರಾಹ ಪುರಾಣದ ಉತ್ತರಖಂಡದಲ್ಲಿ ಈ ಬೆಟ್ಟಕ್ಕೆ ಕೃತಯುಗದಲ್ಲಿ ಶೇಷಾದ್ರಿ, ತ್ರೇತಾಯುಗದಲ್ಲಿ ಕನಕಾದ್ರಿ, ದ್ವಾಪರಯುಗದಲ್ಲಿ ವೆಂಕಟಾದ್ರಿ ಹಾಗೂ ಕಲಿಯುಗದಲ್ಲಿ ವ್ಯಾಘ್ರಾದ್ರಿ (ಹುಲಿಗಿನ ಮುರಡಿ) ಎಂದೂ ಕರೆಯಲಾಗಿದೆ.
ವ್ಯಾಸರಿಂದ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ: ವ್ಯಾಸರಾಯರು ಆಂಜನೇಯಸ್ವಾಮಿಯನ್ನು ಇಲ್ಲಿ ಪ್ರತಿಷ್ಠಾಪಿಸಿದರು ಎಂಬುದು ವಿಶೇಷ. ದೇವಾಲಯದ ಬಲಭಾಗದಲ್ಲಿ ಬಾಲದಲ್ಲಿ ಗಂಟೆ ಹಾಗೂ ಕೈನಲ್ಲಿ ಪುಷ್ಪ ಹಿಡಿದಿರುವ ಆಳೆತ್ತರದ ಆಂಜನೇಯನ ಮೂರ್ತಿಯಿದೆ. ಇನ್ನು ಶ್ರೀ ಹುಲಿಗಿನ ಮುರಡಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ ಸೇವಾ ಸಮಿತಿ ಭಕ್ತರ ನೆರವಿನೊಂದಿಗೆ 2005 ರಲ್ಲಿ 36 ಲಕ್ಷ ರೂ.ವೆಚ್ಚದಲ್ಲಿ ಮಹಾದ್ವಾರ ಹಾಗೂ ರಾಜಗೋಪುರ ನಿರ್ಮಿಸಿತು.
ಪುಣ್ಯತೀರ್ಥಗಳು: ದೇವಾಲಯದ ಆವರಣದಲ್ಲಿ ಪುರಾಣ ಪ್ರಸಿದ್ಧವಾದ ಧನುಷ್ಕೋಟಿ ತೀರ್ಥ, ವೇದ ಪುಷ್ಕರಿಣಿ ತೀರ್ಥ ಮತ್ತು ವೈಕುಂಠ ತೀರ್ಥಗಳೆಂಬ ಕೊಳಗಳಿವೆ. ಶ್ರೀರಾಮನು ಲಂಕೆಗೆ ಹೊರಟ ಸಂದರ್ಭದಲ್ಲಿ ದೇವರ ಅನುಗ್ರಹ ಪಡೆಯಲು ತನ್ನ ಸ್ನಾನಕ್ಕಾಗಿ ಧನಸ್ಸಿನ ತುದಿಯಿಂದ ಚುಚ್ಚಿ ಕಲ್ಲುಬಂಡೆಯಿಂದ ನೀರು ತೆಗೆದ ಸ್ಥಳವೇ ಧನುಷ್ಕೋಟಿ ತೀರ್ಥ, ರಾಕ್ಷಸರಿಂದ ವೇದಗಳನ್ನು ರಕ್ಷಿಸಿದ ಸಂದರ್ಭದಲ್ಲಿ ಪರಮಪುರುಷನ ಶರೀರದಿಂದ ತೊಟ್ಟಿಕ್ಕಿದ ಬೆವರು ಬಿದ್ದ ಸ್ಥಳವೇ ವೇದಪುಷ್ಕರಿಣಿ ತೀರ್ಥ, ವೈಕುಂಠದಿಂದ ಬಂದ ಪರಮ ಪುರುಷನಿಂದಲೇ ನಿರ್ಮಿತವಾದ ಕೊಳವೇ ವೈಕುಂಠತೀರ್ಥ ಎಂದು ಕರೆಯಲಾಗುತ್ತಿದೆ.
ತಲುಪುವ ಮಾರ್ಗ: ಹುಲಿಗನ ಮುರಡಿ ವೆಂಕಟರಮಣಸ್ವಾಮಿ ದೇವಸ್ಥಾನ ತೆರಕಣಾಂಬಿ ಗ್ರಾಮದಿಂದ 8 ಕಿ.ಮೀ. ದೂರದ ಬೆಟ್ಟದ ಮೇಲಿದೆ. ತಾಲೂಕು ಕೇಂದ್ರದಿಂದ ತೆರಕಣಾಂಬಿ ಮಾರ್ಗವಾಗಿ 20 ಕಿಮೀ, ಜಿಲ್ಲಾ ಕೇಂದ್ರದಿಂದ 30 ಕಿಮೀ ದೂರದಲ್ಲಿದೆ. ತಿರುಪತಿಗೆ ತೆರಳಲು ಸಾಧ್ಯವಾಗದ ಭಕ್ತರು ಇಲ್ಲಿಗೆ ಬಂದು ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವುದರಿಂದ ಇದಕ್ಕೆ ಚಿಕ್ಕತಿರುಪತಿ ಎಂದೂ ಕರೆಯಲಾಗುತ್ತಿದೆ.
ಮಾಂಡವ್ಯ ಮಹರ್ಷಿಗಳಿಂದ ಪ್ರತಿಷ್ಠಾಪಿಸಿದ ಮೂರ್ತಿಗಳಿಗೆ ಋಷಿಯು ಈಗಲೂ ಮಂಡೂಕ ರೂಪದಲ್ಲಿ ಬಂದು ಸ್ವಾಮಿಯನ್ನು ಆರಾಧಿಸುತ್ತಿದ್ದಾರೆ ಎಂಬ ಪ್ರತೀತಿಯಿದೆ. ಅವಿವಾಹಿತರು ಇಲ್ಲಿ ಬಂದು ಕಂಕಣ ಕಟ್ಟಿಸಿಕೊಂಡರೆ ಕಂಕಣ ಭಾಗ್ಯ ಹಾಗೂ ಮಕ್ಕಳಿಲ್ಲದ ದಂಪತಿ ಸಂಕ್ರಾಂತಿಯಂದು ದಿವ್ಯ ರಥೋತ್ಸವ ಹಾಗೂ ಮೊದಲನೇ ಶ್ರಾವಣ ಶನಿವಾರ ಚಿಕ್ಕ ರಥೋತ್ಸವ ಸಂದರ್ಭದಲ್ಲಿ ಗರುಡಬುತ್ತಿ ಪಡೆದುಕೊಂಡರೆ ಸಂತಾನ ಭಾಗ್ಯ ದೊರಕುತ್ತಿದೆ ಎಂಬ ನಂಬಿಕೆಯಿದೆ.
ಜೆ.ರಾಘವನ್, ಪ್ರಧಾನ ಅರ್ಚಕ, ವೆಂಕಟರಮಣಸ್ವಾಮಿ ದೇವಸ್ಥಾನ